ಆ್ಯಂಬುಲೆನ್ಸ್ ಗಾಗಿ ಕಾಯುತ್ತಿದ್ದವರ ಮೇಲೆ ಹರಿದ ಲಾರಿ: ನಾಲ್ವರು ಸ್ಥಳದಲ್ಲೇ ಸಾವು

ಹುಬ್ಬಳ್ಳಿ: ಎರಡು ಕಾರುಗಳ ನಡುವೆ ನಡೆದ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಗಾಗಿ ಕಾಯುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದಿದ್ದು, ಪರಿಣಾಮವಾಗಿ ನಾಲ್ವರು ಮೃತಪಟ್ಟ ಆಘಾತಕಾರಿ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಬಳಿಯ ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕಾರು ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್ ಗಾಗಿ ಕಾಯುತ್ತಿದ್ದ ವೇಳೆ ಅತೀ ವೇಗ ಹಾಗೂ ಅಜಾಗರೋಕತೆಯ ಚಾಲನೆಯೊಂದಿಗೆ ನುಗ್ಗಿ ಬಂದ ಲಾರಿ ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದಿದೆ. ಪರಿಣಾಮವಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೂ ಈ ಅಪಘಾತದಲ್ಲಿ ಗಾಯಗೊಂಡವರು ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಯಾವ ರೀತಿ ಆಗಿದೆ ಎಂದು ಗೊತ್ತಾಗಿಲ್ಲ. ಇಬ್ಬನಿ ಏನಾದರೂ ಇತ್ತಾ ಎಂದು ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು ಎಂದು ಮರುಕು ವ್ಯಕ್ತಪಡಿಸಿದ್ದಾರೆ.