ಬಡವರಿಗೆ ಗೋಮೂತ್ರ, ಸೆಗಣಿ, ಬೆಳ್ಳುಳ್ಳಿ; ಬಿಜೆಪಿ ನಾಯಕರಿಗೆ ಮಣಿಪಾಲ್ ಆಸ್ಪತ್ರೆ | ಪ್ರಿಯಾಂಕ್ ಖರ್ಗೆ ಕಿಡಿ
ಬೆಂಗಳೂರು: ಕೊರೊನಾ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿದವರು ಬಿಜೆಪಿಗರು. ತಮ್ಮ ವೈಫಲ್ಯ ಮರೆಮಾಚಲು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಕೊರೊನಾ ಬಂದ್ರೆ ಆಯುರ್ವೆದ ಬಳಕೆ ಮಾಡಿ, ಗೋ ಮುತ್ರ ಕುಡಿಯಿರಿ, ಸಗಣಿ ಮೆತ್ತಿಕೊಳ್ಳಿ ಎಂದು ಬಡವರಿಗೆ ಹೇಳುತ್ತಾರೆ. ಆದರೆ ಅವರಿಗೆ ಕೊರೊನಾ ಬಂದರೆ ಮಣಿಪಾಲ್ ಆಸ್ಪತ್ರೆ ಸೇರಿದಂತೆ ಉನ್ನತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಬಿಜೆಪಿಯುವರು ಮೊದಲು ನೀವು ಮಾಡುತ್ತಿರುವ ಅವೈಜ್ಞಾನಿಕ ಪ್ರಚಾರಗಳನ್ನು ನಿಲ್ಲಿಸಿ, ಹಾಗೆಯೇ ನಿಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಂಡು ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಮಾಡುವುದನ್ನು ಬಿಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕೊರೊನಾ ಬಂದ ಯಾವ ಬಿಜೆಪಿ ನಾಯಕರು ಗೋ ಮೂತ್ರ ಕುಡಿಯಲಿಲ್ಲ, ಬೆಳ್ಳುಳ್ಳಿ ತಿನ್ನಲಿಲ್ಲ. ಬದಲಿಗೆ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದು ಗುಣಮುಖರಾದರು. ಸಲಹೆಗಳನ್ನು ಬಡವರು ಮಾತ್ರ ಪಾಲಿಸಬೇಕು ಎಂಬುದು ಬಿಜೆಪಿ ನಾಯಕರ ಧೋರಣೆ ಎಂದು ಕಿಡಿಕಾರಿದರು.