ಕೊರೊನಾ ಲಸಿಕೆ ಹಾಕಲು ಬಂದ ಅಧಿಕಾರಿಗಳನ್ನು ಕಂಡು ನದಿಗೆ ಹಾರಿದ ಗ್ರಾಮಸ್ಥರು!
ಬಾರಾಬಂಕಿ: ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ್ದಕ್ಕೆ ಗ್ರಾಮಸ್ಥರು ನದಿಗೆ ಹಾರಿದ ಘಟನೆ ಮೌಢ್ಯದ ಕೂಪ ಎಂದೇ ಕರೆಯಲ್ಪಡುವ ಉತ್ತರಪ್ರದೇಶದಲ್ಲಿ ನಡೆದಿದ್ದು, ಭಯ ಮತ್ತು ಮೌಢ್ಯದ ತಪ್ಪು ಕಲ್ಪನೆಯಿಂದ ಗ್ರಾಮಸ್ಥರು ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬಾರಬಂಕಿ ಜಿಲ್ಲೆಯ ಸಿಸೌಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರಿಗೆ ಕೊರೊನಾ ಲಸಿಕೆ ನೀಡಲು ವೈದ್ಯರ ತಂಡವೊಂದು ಗ್ರಾಮಕ್ಕೆ ಆಗಮಿಸಿತ್ತು. ಈ ವೇಳೆ ಲಸಿಕೆ ಪಡೆಯಲು ಅವರು ನಿರಾಕರಿಸಿದ್ದಾರೆ.
ಸಾಂಕ್ರಾಮಿಕ ರೋಗ ಕೊರೊನಾದಿಂದ ರಕ್ಷಣೆ ಪಡೆಯಬೇಕಾದರೆ ಕೊರೊನಾ ಲಸಿಕೆ ಪಡೆಯಬೇಕು ಎಂದು ಅಧಿಕಾರಿಗಳು ಸಾಕಷ್ಟು ಮನವೊಲಿಸಲು ಯತ್ನಿಸಿದರೂ ವಿಫಲವಾಗಿದೆ. ಕೆಲವರು ಅಧಿಕಾರಿಗಳಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಅಧಿಕಾರಿಗಳು ಅವರನ್ನು ಹಿಂಬಾಳಿಸಿದ್ದಾರೆ. ಇದರಿಂದ ಭಯಭೀತರಾದ ಅವರು ಆರೋಗ್ಯ ಸಿಬ್ಬಂದಿಯ ಕೈಯಿಂದ ತಪ್ಪಿಸಿಕೊಳ್ಳುಲು ಓಟ ಆರಂಭಿಸಿದ್ದಾರೆ.
ಹೀಗೆ ಆರಂಭವಾದ ಓಟದಲ್ಲಿ 200ಕ್ಕೂ ಅಧಿಕ ಮಂದಿ ಇದ್ದರು. ಅಧಿಕಾರಿಗಳು ಗ್ರಾಮಸ್ಥರ ಹಿಂದೆ ಓಡಿ ಅವರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ನಮ್ಮನ್ನು ಬೆನ್ನಟ್ಟುತ್ತಿದ್ದಾರೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಗ್ರಾಮಸ್ಥರು ನದಿಗೆ ಹಾರಿದ್ದಾರೆ.