ಮಂಗಳೂರು: ಮಾದಕ ದ್ರವ್ಯ ಸೇವನೆ ಪ್ರಕರಣ ಸರಿಯಾದ ತನಿಖೆ ನಡೆಸುವಲ್ಲಿ ತನಿಖಾ ಸಂಸ್ಥೆ ವಿಫಲ | ಮನೋ ರಾಜ್, ಮಹಬಲೇಶ್‌ ಶೆಟ್ಟಿ ಗಂಭೀರ ಆರೋಪ - Mahanayaka
2:33 PM Thursday 12 - December 2024

ಮಂಗಳೂರು: ಮಾದಕ ದ್ರವ್ಯ ಸೇವನೆ ಪ್ರಕರಣ ಸರಿಯಾದ ತನಿಖೆ ನಡೆಸುವಲ್ಲಿ ತನಿಖಾ ಸಂಸ್ಥೆ ವಿಫಲ | ಮನೋ ರಾಜ್, ಮಹಬಲೇಶ್‌ ಶೆಟ್ಟಿ ಗಂಭೀರ ಆರೋಪ

drugs case
24/01/2023

ಮಂಗಳೂರಲ್ಲಿ ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಆದರೆ ಪ್ರಕರಣದ ಸರಿಯಾದ ತನಿಖೆ ನಡೆಸುವಲ್ಲಿ ತನಿಖಾ ಸಂಸ್ಥೆ ವಿಫಲವಾಗಿದೆ. ವೈದ್ಯರು ಮತ್ತು ವಿದ್ಯಾರ್ಥಿಗಳನ್ನು ಸೂಕ್ತ ವಿಚಾರಣೆ ನಡೆಸದೇ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಕರ್ತವ್ಯಲೋಪ ಎಸಗಿದ್ದಾರೆ ಎಂದು ನ್ಯಾಯವಾದಿ ಹಾಗೂ ಬಾರ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಮನೋ ರಾಜ್‌ ಮತ್ತು ವಿಧಿವಿಜ್ಞಾನ ತಜ್ಞ ಮಹಬಲೇಶ್‌ ಶೆಟ್ಟಿ ಗಂಭೀರವಾಗಿ ಆರೋಪಿಸಿದ್ದಾರೆ.

ಅವರು  ಮಂಗಳವಾರ ಮಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಆರಂಭದಲ್ಲಿ ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ, ಹಿಂದಿನ ಜಿಲ್ಲಾ ಸರಕಾರಿ ವಕೀಲ ಮನೋರಾಜ್ ರಾಜೀವ ಮಾತನಾಡುತ್ತಾ, ನಾವು ಡ್ರಗ್ ಪೆಡ್ಲರ್‌ಗಳು ಅಥವಾ ಗ್ರಾಹಕರ ಪರವಾಗಿಲ್ಲ. ಆದರೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸುವ ಮುನ್ನ ಮತ್ತು ಅವರನ್ನು ಬಂಧಿಸುವ ಮೊದಲು ಕಾನೂನು ಜಾರಿಗೊಳಿಸುವ ಸಂಸ್ಥೆಗಳು ತನಿಖೆಯನ್ನು ಸರಿಯಾದ ರೀತಿಯಲ್ಲಿ ಮತ್ತು ನ್ಯಾಯಯುತವಾಗಿ ನಡೆಸಿವೆಯೇ? ತಮ್ಮ ಕರ್ತವ್ಯವನ್ನು ವಿವೇಚನೆಯಿಂದ ನಿರ್ವಹಿಸಿವೆಯೇ ಎಂದು ಪ್ರಶ್ನಿಸಿದರು. ವಶಕ್ಕೆ ಪಡೆದುಕೊಂಡ ಆರೋಪಿಗಳನ್ನು ಕಮಿಷನರ್ ಅವರು ಸರಿಯಾಗಿ ವಿಚಾರಣೆ ಮಾಡಿದ್ದಾರೋ ಇಲ್ಲವೋ ಎಂಬ ಬಗ್ಗೆ ನಮಗೆ ಡೌಟ್ ಇದೆ. ಕೆಲವೊಂದು ಪ್ರೊಸೀಜರ್ ಲ್ಯಾಪ್ಸ್ ಆಗಿದೆ. ನಮಗೆ ಕೆಲವೊಂದು ಅನುಮಾನಗಳಿವೆ. ಅವರು ಡ್ರಗ್‌ ಸೇವನೆ ಮಾತ್ರ ಮಾಡಿದ್ದರೆ ಅವರನ್ನು ರಿಹ್ಯಾಬ್ಲಿಟೇಶನ್ ಸೆಂಟರ್ ಗೆ ಕಳುಹಿಸಬೇಕಾಗಿತ್ತು. ಈ ಪ್ರಕರಣದ ಬಗ್ಗೆ ನಾವು ಹೈಕೋರ್ಟ್‌ಗೆ ರಿಟ್‌ ಹಾಕಲಿಕ್ಕೆ ರೆಡಿ ಆಗಿದ್ದೇವೆ. ಹಾಲಿ ನ್ಯಾಯಾಧೀಶರಿಂದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮನವಿ ಮಾಡುತ್ತಿದ್ದೇವೆ ಎಂದರು.

1985ರ ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ ಆಕ್ಟ್  ನ ಸೆಕ್ಷನ್ 64ಎ ಪ್ರಕಾರ ಚಿಕಿತ್ಸೆಗಾಗಿ ವ್ಯಸನಿಗಳಿಗೆ ಕಾನೂನು ಕ್ರಮದಿಂದ ವಿನಾಯಿತಿ ಇರುತ್ತದೆ. ಅಲ್ಲದೆ ಅವರು ಪುನರ್ವಸತಿ ಕೇಂದ್ರಗಳಿಗೆ ಹೋಗಲು ಸಿದ್ದರಾಗಿದ್ದರೆ ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಅಗತ್ಯವಿರುವುದಿಲ್ಲ. ಕಾನೂನಿನಲ್ಲಿ ಇಂತಹ ಅವಕಾಶವಿದ್ದರೂ, ಸಂಸ್ಥೆ ಯಾಕೆ ಈ ಕ್ರಮಕ್ಕೆ ಮುಂದಾಗಿಲ್ಲ ಎಂದವರು ಪ್ರಶ್ನಿಸಿದರು.

ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದರಿಂದ ಅವರ ನೈತಿಕ ಸ್ಥೈರ್ಯ ಕುಸಿಯುತ್ತದೆ. ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 64 ಎ ನಿಬಂಧನೆಯನ್ನು ಬಳಸಲು ತನಿಖಾ ಸಂಸ್ಥೆ ವಿಫಲವಾಗಿದೆ. ಆರೋಪಿಗಳ ಛಾಯಾಚಿತ್ರಗಳನ್ನು ಮಾಧ್ಯಮಗಳಿಗೆ ನೀಡಲಾಗಿದೆ. ಇದರಿಂದ ವ್ಯಕ್ತಿ ಮಾತ್ರವಲ್ಲದೆ ಆತನ ಕುಟುಂಬದ ಪ್ರತಿಷ್ಠೆಗೂ ಧಕ್ಕೆಯಾಗುತ್ತದೆ. ಬ್ರಾಂಡ್ ಮಂಗಳೂರಿಗೆ ಕೆಟ್ಟ ಹೆಸರು ತರುತ್ತಿದ್ದೇವೆ. ಶಿಕ್ಷಣ ಸಂಸ್ಥೆಗಳು ಮತ್ತು ದೇವಾಲಯಗಳ ಕೇಂದ್ರವಾಗಿರುವ ಮಂಗಳೂರಿನ ಹೆಸರಿಗೆ ಧಕ್ಕೆಯಾಗುವುದಲ್ಲದೆ, ವೈದ್ಯಕೀಯ ಸಂಸ್ಥೆಗಳ ಇಮೇಜ್‌ಗೂ ಹಾನಿಯಾಗುತ್ತದೆಯಲ್ಲವೇ ಎಂದು ಪ್ರಶ್ನಿಸಿದರು.

ಇನ್ನು ಪ್ರೊಫೆಸರ್ ಮತ್ತು ಫೋರೆನ್ಸಿಕ್ ತಜ್ಞ ಮಹಾಬಲೇಶ್ ಶೆಟ್ಟಿ ಮಾತನಾಡಿ, ಸ್ಕ್ರೀನ್ ಟೆಸ್ಟ್‌ಗಳು ಪಾಸಿಟಿವ್ ಸೂಚಿಸುತ್ತವೆ, ಆದರೆ ದೃಢಪಡಿಸುವುದಿಲ್ಲ. ಮಾದರಿಗಳನ್ನು ದೃಢೀಕರಿಸಲು 24 ಗಂಟೆಯೊಳಗೆ ಎಫ್‌ಎಸ್‌ಎಲ್, ಸಿಎಫ್‌ಎಲ್ ಪರೀಕ್ಷೆ ಇರಬೇಕು. ಗ್ರಾಹಕರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ಅವಕಾಶವಿರುವಾಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ವಿಧಿವಿಜ್ಞಾನ ತಜ್ಞರು ದೃಢೀಕರಣವನ್ನು ಬಹಿರಂಗಪಡಿಸಬೇಕು. ಪೊಲೀಸ್ ಇಲಾಖೆ ಅಧಿಕಾರಿಗಳು ಮಾದಕ ವಸ್ತು ಸೇವಿಸಿದವರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ