ಮಧ್ಯಪ್ರದೇಶ ಸಿಎಂ ಆಯ್ಕೆ ಸರ್ಕಸ್: ಡಿಸೆಂಬರ್ 11ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದ ಬಿಜೆಪಿ
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢಕ್ಕೆ ಬಿಜೆಪಿ ವೀಕ್ಷಕರನ್ನು ನೇಮಿಸಿದೆ. ಇತ್ತ ರಾಜ್ಯದ ಜನರು ಈ ರಾಜ್ಯಗಳಲ್ಲಿ ಆಯಾ ಮುಖ್ಯಮಂತ್ರಿಗಳ ಘೋಷಣೆಗಾಗಿ ಕಾಯುತ್ತಿದ್ದಾರೆ. ಈಗ ಮಧ್ಯಪ್ರದೇಶದಲ್ಲಿ ದೊಡ್ಡ ಬೆಳವಣಿಗೆ ನಡೆದಿದೆ. ವರದಿಗಳ ಪ್ರಕಾರ, ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಡಿಸೆಂಬರ್ 11 ರಂದು ಮಧ್ಯಪ್ರದೇಶದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಈ ಮಧ್ಯೆ, ರಾಜ್ಯದ ಮೂವರು ವೀಕ್ಷಕರಾದ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ ಲಕ್ಷ್ಮಣ್ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಖ್ರಾ ಅವರು ಶಾಸಕರು ಮತ್ತು ಸಂಭಾವ್ಯ ಅಭ್ಯರ್ಥಿಗಳನ್ನು ಭೇಟಿ ಮಾಡಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ.
ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ. ಕೈಲಾಶ್ ವಿಜಯವರ್ಗಿಯಾ, ನರೇಂದ್ರ ಸಿಂಗ್ ತೋಮರ್, ವಿ.ಡಿ.ಶರ್ಮಾ ಮತ್ತು ಪ್ರಹ್ಲಾದ್ ಸಿಂಗ್ ಪಟೇಲ್ ಇತರ ಸ್ಪರ್ಧಿಗಳಲ್ಲಿ ಸೇರಿದ್ದಾರೆ.
230 ಸದಸ್ಯರ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರಿ ಗೆಲುವು ಸಾಧಿಸಿತು. ಆದರೆ ರಾಜ್ಯದಲ್ಲಿ ಪುನರಾಗಮನ ಮಾಡಲು ಎದುರು ನೋಡುತ್ತಿದ್ದ ಕಾಂಗ್ರೆಸ್ ಕೇವಲ 66 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದ ಕಾರಣ, ಅವರ ಭವಿಷ್ಯದ ಬಗ್ಗೆ ಸಸ್ಪೆನ್ಸ್ ಮುಂದುವರೆದಿದೆ.
ಮತ್ತೊಂದೆಡೆ ಛತ್ತೀಸ್ ಗಢದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಡಿಸೆಂಬರ್ 10 ರಂದು ನಡೆಯುವ ಸಾಧ್ಯತೆ ಇದೆ. ಕೃಷಿ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ಬಂದರು ಮತ್ತು ಹಡಗು ಸಚಿವ ಸರ್ಬಾನಂದ ಸೋನೊವಾಲ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಅವರು ರಾಜ್ಯಕ್ಕೆ ಬಿಜೆಪಿ ವೀಕ್ಷಕರಾಗಿದ್ದಾರೆ.