ಶಾಸಕರೇ ಅಲ್ಲದವರನ್ನು ಹೇಗೆ ಸಚಿವರಾಗಿ ನೇಮಿಸಿದ್ದೀರಿ? | ಹೈಕೋರ್ಟ್ ಪ್ರಶ್ನೆ
ಭೋಪಾಲ್: ಶಾಸಕರೇ ಅಲ್ಲದವರನ್ನು ಸಚಿವರಾಗಿ ಹೇಗೆ ನೇಮಿಸಿಕೊಳ್ಳಲಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ನ ಜಬಲ್ಪುರ ಪೀಠ ನೋಟಿಸ್ ಜಾರಿ ಮಾಡಿದ್ದು, ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ 14 ಮುಖಂಡರನ್ನು ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದಲ್ಲಿ ಸಚಿವರನ್ನಾಗಿ ನೇಮಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಈ ರೀತಿಯಾಗಿ ಪ್ರಶ್ನಿಸಿದೆ.
ಛಿಂದ್ವಾರ ಮೂಲದ ವಕೀಲರಾದ ಆರಾಧನಾ ಭಾರ್ಗವ್ ಅವರು, ಶಾಸಕೇತರ ನಾಯಕರನ್ನು ಕ್ಯಾಬಿನೆಟ್ ಸಚಿವರನ್ನಾಗಿ ನೇಮಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ವಿಭಾಗೀಯ ಪೀಠದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಯಾದವ್ ಮತ್ತು ನ್ಯಾಯಮೂರ್ತಿ ಆರ್‌ಕೆ ದುಬೆ ಅವರು ಸಚಿವರು, ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್ ಮತ್ತು ರಾಜ್ಯಪಾಲರು ಸೇರಿದಂತೆ 17 ಮಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಶಾಸಕರೇ ಅಲ್ಲದ 14 ಮಂದಿಯನ್ನು ಸಚಿವರನ್ನಾಗಿ ಮಾಡಿರುವುದು ಯಾವುದೇ ರಾಜ್ಯದ ಅಥವಾ ಕೇಂದ್ರ ಸರ್ಕಾರದ ಇತಿಹಾಸದಲ್ಲಿ ನಡೆದಿಲ್ಲ. ಇದು ಸಂವಿಧಾನದ 163 ಮತ್ತು 164ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.