ಮದ್ಯಭಾಗ್ಯ: ಕಾಂಗ್ರೆಸ್ ಸರ್ಕಾರ ಗಾಂಧಿ ಜಯಂತಿ ಆಚರಿಸಬಾರದೆಂದು ಎಸ್ ಡಿಪಿಐ ಪ್ರತಿಭಟನೆ
02/10/2023
ಚಾಮರಾಜನಗರ: ಹೊಸ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಅವಕಾಶ ಮಾಡಿಕೊಡುವ ಮೂಲಕ ಸಿದ್ದರಾಮಯ್ಯ ಮದ್ಯಭಾಗ್ಯ ಕೊಡುತ್ತಿದ್ದಾರೆಂದು ಆರೋಪಿಸಿ ಇಂದು ಚಾಮರಾಜನಗರದಲ್ಲಿ ಎಸ್ ಡಿಪಿಐ ಪ್ರತಿಭಟಿಸಿ ಆಕ್ರೋಶ ಹೊರಹಾಕಿತು.
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಪ್ಲೆಕಾರ್ಡ್ ಹಿಡಿದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಮದ್ಯಪಾನ ವಿರೋಧಿಯಾಗಿದ್ದ ಮಹಾತ್ಮ ಗಾಂಧಿ ಅವರ ಜಯಂತಿ ಆಚರಿಸಲು ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಯಾವುದೇ ನೈತಿಕತೆ ಇಲ್ಲಾ, ಸಿದ್ದರಾಮಯ್ಯ ಗಾಂಧಿಜೀ ಅವರಿಗೆ ಮಾಲಾರ್ಪಣೆ ಮಾಡಬಾರದು, ಕಾಂಗ್ರೆಸ್ ಕಚೇರಿ, ಕಚೇರಿಗಳಲ್ಲಿ ಗಾಂಧಿ ಜಯಂತಿ ಆಚರಿಸಿ ಮಹಾತ್ಮನಿಗೆ ಅಗೌರವ ಸಲ್ಲಿಸಬಾರದು ಎಂದು ಒತ್ತಾಯಿಸಿದರು.
ಗೃಹಲಕ್ಷ್ಮೀ ಮೂಲಕ ಮಹಿಳೆಯರಿಗೆ 2 ಸಾವಿರ ರೂ. ಕೊಡುತ್ತೇವೆಂದು ಹೇಳುತ್ತಾರೆ, ಮತ್ತೊಂದೆಡೆ ಹೆಚ್ಚುವರಿಯಾಗಿ ಸಾವಿರ ಮದ್ಯದಂಗಡಿ ತೆರೆಯಲು ಮುಂದಾಗಿದ್ದಾರೆ, ಮದ್ಯಪಾನವನ್ನು ಸಂಪೂರ್ಣವಾಗಿ ಕರ್ನಾಟಕದಲ್ಲಿ ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.