ಮದುವೆ ಮಾಡಿಸುತ್ತೇನೆ ಎಂದು ರಾತ್ರಿ ವೇಳೆ ಅಪ್ರಾಪ್ತೆಯನ್ನು ಕರೆದುಕೊಂಡು ಹೋದ ಮಾವನಿಂದ ನೀಚ ಕೃತ್ಯ!
ಮುದ್ದೇಬಿಹಾಳ: ಪ್ರಿಯಕರನ ಜೊತೆಗೆ ಮದುವೆ ಮಾಡಿಸುತ್ತೇನೆ ಎಂದು ರಾತ್ರಿ ವೇಳೆ ಯುವತಿಯನ್ನು ಮನೆಯಿಂದ ಕರೆದುಕೊಂಡು ಹೋದ ಸೋದರ ಮಾವ ಯುವತಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಜೂನ್ 9ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಠಾಣಾ ವ್ಯಾಪ್ತಿಯ ಬಳುಂಡಗಿ ಗ್ರಾಮದ 17 ವರ್ಷ ವಯಸ್ಸಿನ ಆರತಿ ಮಲ್ಲಪ್ಪ ಬಿಲ್ಲಾಡ ಎಂಬ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೃತದೇಹ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಮ್ಮಲದಿನ್ನಿ ಕ್ರಾಸ್ ಬಳಿಯ ಇಣಚಗಲ್ ಸೇತುವೆ ಕೆಳಗೆ ಪತ್ತೆಯಾಗಿತ್ತು. ಈ ಪ್ರಕರಣ ನಡೆದು ಒಂದು ವಾರದೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹತ್ಯೆಗೀಡಾದ ಬಾಲಕಿಗೆ ತಂದೆಯಿಲ್ಲ, ಆಕೆ ತಾಯಿಯ ಜೊತೆಗೆ ಬದುಕುತ್ತಿದ್ದಳು. ಇವರ ಮನೆಯ ಎಲ್ಲ ಆಗುಹೋಗುಗಳನ್ನು ಆಕೆಯ ಮಾವ 43 ವರ್ಷ ವಯಸ್ಸಿನ ಸಿದ್ರಾಮಪ್ಪ ಕಲ್ಲಪ್ಪ ಅವಟಿ ನೋಡಿಕೊಳ್ಳುತ್ತಿದ್ದ.
ಈ ನಡುವೆ ಆರತಿ ತನ್ನ ಗ್ರಾಮದ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಆತ ಇವರಿಬ್ಬರು ಜೊತೆಗಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ವಿಚಾರ ಸಿದ್ರಾಮಪ್ಪಗೆ ಕೂಡ ತಿಳಿದು ಬಂದಿದೆ. ಈ ಘಟನೆಯಿಂದ ತೀವ್ರವಾಗಿ ಆಕ್ರೋಶಕ್ಕೊಳಗಾದ ಸಿದ್ರಾಮಪ್ಪ ರಾತ್ರಿ ವೇಳೆ ಬಂದು, ಯುವಕನೊಂದಿಗೆ ಕೂಡಲ ಸಂಗಮದಲ್ಲಿ ಮದುವೆ ಮಾಡಿಸುವುದಾಗಿ ಕರೆದುಕೊಂಡು ಹೋಗಿದ್ದು, ಜಮ್ಮಲದಿನ್ನಿ ಕ್ರಾಸ್ ಬಳಿಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.