ಮದುವೆ ಪ್ರಸ್ತಾಪ ತಿರಸ್ಕರಿಸಿದಕ್ಕಾಗಿ ಯುವಕನಿಂದ ಹೀನ ಕೃತ್ಯ | ಕೊನೆಗೂ ನ್ಯಾಯ ಪಡೆದ ಯುವತಿ
ತಿರುವನಂತಪುರಂ: ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ವ್ಯಕ್ತಿಯೋರ್ವ ಮಹಿಳಾ ಉದ್ಯಮಿಯನ್ನು ಗಾಂಜಾ ಕೇಸ್ ನಲ್ಲಿ ಸಿಲುಕಿಸಿದ ಘಟನೆ ನಡೆದಿದ್ದು, ಇದರ ವಿರುದ್ಧ ಒಂದು ತಿಂಗಳುಗಳ ಕಾಲ ಕಾನೂನು ಹೋರಾಟ ನಡೆಸಿದ ಬಳಿಕ ಮಹಿಳಾ ಉದ್ಯಮಿ ಇದೀಗ ದೋಷಮುಕ್ತರಾಗಿದ್ದಾರೆ.
ಕೈಮಗ್ಗದ ಅಂಗಡಿ ವೀವರ್ ವಿಲ್ಲಾ ಮಾಲಕಿ ಶೋಭಾ ವಿಶ್ವನಾಥನ್ ಅವರ ಕಂಪೆನಿಯಲ್ಲಿ ಜನವರಿಯಲ್ಲಿ ಅರ್ಧ ಕೆ.ಜಿ. ಗಾಂಜಾ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯೂಸಿಯಂ ಪೊಲೀಸ್ ಹಾಗೂ ನಾರ್ಕೊಟಿಲ್ ಸೆಲ್ ಶೋಭಾ ಅವರನ್ನು ಬಂಧಿಸಿತ್ತು. ಆ ಬಳಿಕ ಅವರಿಗೆ ಜಾಮೀನು ಕೂಡ ಲಭಿಸಿತ್ತು.
ಗಾಂಜಾ ಕೇಸ್ ನಲ್ಲಿ ಬಂಧನವಾಗಿದ್ದರಿಂದಾಗಿ ಶೋಭಾ ಅವರು ಸಾಮಾಜಿಕವಾಗಿ ಬಹಳಷ್ಟು ಅವಮಾನಗಳನ್ನು ಅನುಭವಿಸಬೇಕಾಯಿತು. ಆದರೆ, ಎದೆಗುಂದದ ಅವರು, ನನ್ನ ಕಂಪೆನಿಯಲ್ಲಿ ಗಾಂಜಾ ಹೇಗೆ ಪತ್ತೆಯಾಯ್ತು ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಮುಖ್ಯಮಂತ್ರಿಗೆ ಹಾಗೂ ಡಿಜಿಪಿಗೆ ದೂರು ನೀಡಿದರು.
ಇವರ ದೂರಿನ ಬಳಿಕ ಅಪರಾಧ ವಿಭಾಗ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ತನಿಖೆಯ ವೇಳೆ ಇದರಲ್ಲಿ ಹರೀಶ್ ಹರಿದಾಸ್ ಎಂಬಾತನ ಕೈವಾಡ ಇದೆ ಎನ್ನುವುದು ತಿಳಿದು ಬಂದಿದೆ. ಈತ ವಿವೇಕ್ ಎಂಬಾತನ ಕೈಯಲ್ಲಿ ಗಾಂಜಾ ಕೊಟ್ಟು ಶೋಭಾ ಅವರ ಕಂಪೆನಿಯಲ್ಲಿರಿಸಲು ಹೇಳಿದ್ದ ಎಂದು ತಿಳಿದು ಬಂದಿದೆ.
ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಹರೀಶ್ ಹರಿದಾಸ್ ಈ ರೀತಿಯ ಕೃತ್ಯ ನಡೆಸಿದ್ದಾನೆ ಎನ್ನುವುದು ತನಿಖೆಯ ವೇಳೆ ತಿಳಿದು ಬಂದಿದೆ. ಇನ್ನೂ ಹರೀಶ್ ಈ ರೀತಿಯ ಕೆಲಸ ಮಾಡುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಶೋಭಾ ಹೇಳಿದ್ದಾರೆ.