ಮದುವೆವಾಗುವುದಾಗಿ ಮಹಿಳೆಯನ್ನು ನಂಬಿಸಿದಾತ ತೋಟದ ಮನೆಗೆ ಕರೆದೊಯ್ದ ವಿವಸ್ತ್ರಗೊಳಿಸಿ 2 ದಿನ ಚಿತ್ರಹಿಂಸೆ ನೀಡಿದ!
ಬೆಂಗಳೂರು: ಮಹಿಳೆಯನ್ನು ವಿವಾಹವಾಗುವುದಾಗಿ ನಂಬಿಸಿ 2.70 ಲಕ್ಷ ರೂಪಾಯಿ ಪಡೆದುಕೊಂಡಿದ್ದ ಬಿಎಂಟಿಸಿ ಚಾಲಕ, ಆಕೆಯನ್ನು ತೋಟದ ಮನೆಗೆ ಕರೆದೊಯ್ದು ವಿವಸ್ತ್ರಗೊಳಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರನಗರ ನಿವಾಸಿಯಾಗಿರುವ 40 ವರ್ಷ ವಯಸ್ಸಿನ ಮಹಿಳೆಯೊಬ್ಬರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಬಿಎಂಟಿಸಿ ಬಸ್ ನಲ್ಲಿ ದಿನವೂ ಪ್ರಯಾಣಿಸುತ್ತಿದ್ದರು. 2019ರಲ್ಲಿ ಚಾಲಕ 42 ವರ್ಷ ವಯಸ್ಸಿನ ವಿಶ್ವನಾಥ್ ಪರಿಚಯವಾಗಿದ್ದು, ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ವಿಶ್ವನಾಥ್, ಸಂತ್ರಸ್ತ ಮಹಿಳೆಯನ್ನು ಆಗಾಗ ತನ್ನ ತಿಪಟೂರಿನಲ್ಲಿರುವ ಮನೆಗೆ ಕರೆದೊಯ್ಯುತ್ತಿದ್ದ ಎಂದು ಹೇಳಲಾಗಿದೆ.
ಮಹಿಳೆಯನ್ನು ವಿವಾಹವಾಗುವುದಾಗಿ ನಂಬಿಸಿದ್ದ ವಿಶ್ವನಾಥ್ ಆಕೆಯಿಂದ 2.70 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾನೆ. ಹಣ ನೀಡಿ 2 ವರ್ಷ ಕಳೆದರೂ ಮಹಿಳೆಗೆ ಆತ ಹಣ ವಾಪಸ್ ನೀಡದೆ ಸತಾಯಿಸಿದ್ದಾನೆ. ಮಾರ್ಚ್ 32ರಂದು ಕೆಎಸ್ಸಾರ್ಟಿಸಿ ಬಸ್ ನಲ್ಲಿ ಮಹಿಳೆಯನ್ನು ಕೂರಿಸಿಕೊಂಡು ತನ್ನ ಹಾಲುಕುರ್ಕೆ ಬಳಿಯ ತೋಟದ ಮನೆಗೆ ಕರೆದೊಯ್ದ ಆತ ಮಹಿಳೆಯನ್ನು ವಿವಸ್ತ್ರಗೊಳಿಸಿ ಕೂಡಿ ಹಾಕಿ ಥಳಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ತೋಟದ ಮನೆಯಲ್ಲಿ ಎರಡು ದಿನ ಕೂಡಿ ಹಾಕಿದ ವಿಶ್ವನಾಥ್, ಇನ್ನು ಹಣ ಕೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಹೇಳಿದ್ದಾನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ