ಮದ್ಯ ಇದೆಯೇ ಎಂದು ಕೇಳಿದವರು, ಸೆಕ್ಯೂರಿಟಿ ಗಾರ್ಡ್ ಕೈ ಕಾಲು ಕಟ್ಟಿ ಹಾಕಿ ಮಾಡಿದ್ದೇನು ಗೊತ್ತಾ?

ಅಥಣಿ: ಮದ್ಯದಂಗಡಿಯ ಸೆಕ್ಯೂರಿಟಿ ಗಾರ್ಡ್ ನ ಕೈ ಕಾಲು ಕಟ್ಟಿ ಹಾಕಿ ನಾಲ್ಕೂವರೆ ಲಕ್ಷ ರೂಪಾಯಿಗಳನ್ನು ಕಳವು ಮಾಡಿರುವ ಘಟನೆ ಬೆಳಗಾವಿಯ ಅಥಣಿಯಲ್ಲಿ ನಡೆದಿದ್ದು, ಗುರುವಾರ ತಡ ರಾತ್ರಿ ಕಳ್ಳರು ಈ ದುಷ್ಕೃತ್ಯ ನಡೆಸಿದ್ದಾರೆ.
ಅಥಣಿ ಪಟ್ಟಣದ ಹೊರವಲಯದ ಕೆಟಗೇರಿ ಗ್ರಾಮದಕ್ಕೆ ಹೊಂದಿಕೊಂಡಿರುವ ಮಾರ್ಗದಲ್ಲಿ ವೆಂಕಟೇಶ್ವರ ವೈನ್ ಶಾಪ್ ಇದೆ. ಗುರುವಾರ ತಡರಾತ್ರಿ ವೈನ್ ಶಾಪ್ ಗೆ ಬಂದ ಇಬ್ಬರು ವ್ಯಕ್ತಿಗಳು ಸಾರಾಯಿ ಕೊಡುವಂತೆ ಸೆಕ್ಯೂರಿಟಿ ಗಾರ್ಡ್ ಗೆ ಕೇಳಿದ್ದಾರೆ.
ಆದರೆ ಅಂಗಡಿ ಬೀಗ ಹಾಕಿದೆ, ಈಗ ಇಲ್ಲ, ನಾಳೆ ಬೆಳಗ್ಗೆ ಬನ್ನಿ ಎಂದಿದ್ದಕ್ಕೆ ವಾಪಸ್ಸು ಹೋಗಿದ್ದಾರೆ. ಅರ್ಧ ಗಂಟೆ ಬಿಟ್ಟು ಮತ್ತೆ ಐದಾರು ಜನ ದ್ವಿಚಕ್ರ ವಾಹನದ ಮೇಲೆ ಬಂದ ಈ ಖದೀಮರು ವೈನ್ ಶಾಪ್ ಕಾಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಬಳಿಕ ಕೈ ಕಾಲು ಕಟ್ಟಿ ಗ್ಯಾಸ್ ವೆಲ್ಡಿಂಗ್ ಮಷೀನ್ ದಿಂದ ಬೀಗ ಕೊಯ್ದು ಒಳ ನುಗ್ಗಿ ಕಳ್ಳತನ ನಡೆಸಿದ್ದಾರೆಎಂದು ಅಥಣಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.