ಮದ್ಯ ಕುಡಿದ ನಶೆಯಲ್ಲಿ ಎಮ್ಮೆ ರೈತನನ್ನು ಪೊಲೀಸರಿಗೆ ಹಿಡಿದುಕೊಟ್ಟಿತು!
ನವದೆಹಲಿ: ಎಮ್ಮೆಗಳಿಂದಾಗಿ ಅಕ್ರಮ ಮದ್ಯ ಮಾರಾಟ ಜಾಲವೊಂದು ಬಯಲಿಗೆ ಬಂದ ವಿಚಿತ್ರ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ರೈತನೋರ್ವನ ಮನೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಆದರೆ ಈವರೆಗೆ ಪೊಲೀಸರಿಗೆ ಇದು ತಿಳಿದಿರಲಿಲ್ಲ. ರೈತನ ಮನೆಯ ಎಮ್ಮೆ ನೀರು ಎಂದು ತಿಳಿದು ಮನೆಯಲ್ಲಿಟ್ಟಿದ್ದ ಮದ್ಯವನ್ನು ಕುಡಿದಿತ್ತು.
ಮದ್ಯ ಒಳ ಸೇರುತ್ತಿದ್ದಂತೆಯೇ ಎಮ್ಮೆಗೆ ನಶೆ ಏರಿದ್ದು, ಸಿಕ್ಕಿದವರಿಗೆಲ್ಲ ಕೊಂಬಿನಿಂದ ತಿವಿಯಲು ಪ್ರಯತ್ನಿಸುತ್ತಿತ್ತು, ವಿಚಿತ್ರವಾಗಿ ವರ್ತಿಸುತ್ತಿತ್ತು. ಎಮ್ಮೆಗೆ ಏನಾಗಿದೆ ಎನ್ನುವುದು ತಿಳಿಯದ ರೈತ ಆತಂಕದಿಂದ ಎಮ್ಮೆಯನ್ನು ಪಶು ವೈದ್ಯರ ಬಳಿಗೆ ಕೊಂಡೊಯ್ದಿದ್ದಾನೆ.
ಈ ವೇಳೆ ಎಮ್ಮೆ ಕಳ್ಳಭಟ್ಟಿ ಸಾರಾಯಿ ಕುಡಿದಿದೆ ಎನ್ನುವುದು ಪಶುವೈದ್ಯಗೆ ತಿಳಿದು ಬಂದಿದೆ. ಪಶುವೈದ್ಯ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ತಕ್ಷಣವೇ ಪೊಲೀಸರು ರೈತನ ಮನೆಗೆ ದಾಳಿ ನಡೆಸಿ, ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ದಿಲೀಪ್ ಸಿನ್ಹಾ ಬುಲ್ದೇವ್ ತಿಳಿಸಿದ್ದಾರೆ.