ಮದ್ಯ ಸೇವಿಸಿ ಮಹಿಳೆ ಸಹಿತ ನಾಲ್ವರು ಸಾವು
ಪ್ರತಾಪ್ ಗಢ: ಮದ್ಯ ಸೇವಿಸಿ ಮಹಿಳೆ ಸೇರಿದಂತೆ ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಪ್ರತಾಪ್ ಗಢದಲ್ಲಿ ನಡೆದಿದ್ದು, ನಕಲಿ ಸಾರಾಯಿಯ ಕಾರಣದಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ,
ಜವಾಹರಲಾಲ್ ಸರೋಜ್(56), ವಿಜಯ್ ಕುಮಾರ್ (35) ಮತ್ತು ರಾಮ್ ಪ್ರಸಾದ್(40) ಮೃತಪಟ್ಟವರಾಗಿದ್ದು, ಸುನೀತಾ ಸರೋಜ್ ಎಂಬಾಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮಾಹಿತಿ ನೀಡಿದೆ.
ಬಾಬುಪಾಲ್ ಪಟೇಲ್ ಎಂಬವರಿಂದ ಮದ್ಯ ಖರೀದಿ ಮಾಡಿ ಈ ಮೂವರೂ ಸೇವಿಸಿದ್ದರು ಎಂದು ತಿಳಿದು ಬಂದಿದೆ. ಮದ್ಯ ಸೇವನೆಯ ಬಳಿಕ ಇವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣವೇ ಅವರನ್ನು ಸಂಗ್ರಾಮ್‌ಗಢ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅಲಹಾಬಾದ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಕವೀಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕಳ್ಳಭಟ್ಟಿ ಮಾರಾಟ ಪ್ರಕರಣದಲ್ಲಿ ಬಾಬುಪಾಲ್, ಅವರ ಪತ್ನಿ ಹಾಗೂ ಸಹೋದರನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.