ಮದ್ಯಪಾನಕ್ಕಿಂತಲೂ ಡೇಂಜರ್ ಈ ಧೂಮಪಾನ | ಸಿಗರೇಟ್ ಬಿಡುವುದು ಹೇಗೆ? - Mahanayaka

ಮದ್ಯಪಾನಕ್ಕಿಂತಲೂ ಡೇಂಜರ್ ಈ ಧೂಮಪಾನ | ಸಿಗರೇಟ್ ಬಿಡುವುದು ಹೇಗೆ?

no smoking
30/05/2021

ಒಬ್ಬ ವ್ಯಕ್ತಿ ಮದ್ಯಪಾನದ ಚಟಕ್ಕೆ ಬಿದ್ದರೂ ವಾಪಸ್ ಬರಬಹುದು, ಆದರೆ, ಸಿಗರೇಟ್ ಚಟಕ್ಕೆ ಬಿದ್ದವನ ಕಥೆ ಸಿಗರೇಟ್ ನಲ್ಲಿಯೇ ಅಂತ್ಯವಾಗುವುದು ಎಂದು ಸಿಗರೇಟ್ ಸೇದುವ ಬಹಳಷ್ಟು ಜನರ ಅಭಿಪ್ರಾಯಗಳಾಗಿವೆ.  ಸಿಗರೇಟ್ ಬಿಟ್ಟು ಬಿಡಬೇಕು ಎಂದು ಎಷ್ಟು ಪ್ರಯತ್ನಿಸಿದರೂ ಸಿಗರೇಟ್ ಬಿಟ್ಟು ಬಿಡಲು ಸಾಧ್ಯವಾಗದೇ ಅಸಹಾಯಕರಾಗಿ ನಿಂತಿರುವ ಬಹಳಷ್ಟು ಧೂಮಪಾನಿಗಳಿದ್ದಾರೆ.

ಸಿಗರೇಟ್ ನಿಂದಾಗಿ ಕ್ಯಾನ್ಸರ್, ಸ್ಟ್ರೋಕ್, ಹೃದಯಾಘಾತ ಮೊದಲಾದ ಕಾಯಿಲೆಗಳು ಆರಂಭವಾಗುತ್ತದೆ.  ಸ್ನೇಹಿತರ ಜೊತೆಗೆ ತಮಾಷೆಗಾಗಿ ಸೇದಲು ಆರಂಭಿಸಿದ ಸಿಗರೇಟ್ ನ್ನು ನಾವುಬಿಡಬೇಕು ಅಂದುಕೊಂಡರೂ ಸಿಗರೇಟ್ ಬಿಡುವುದಿಲ್ಲ. ಇಂತಹ ಸಮಸ್ಯೆಗಳನ್ನು ಎದುರಿಸುವವರು ಸಿಗರೇಟ್ ನ್ನು ಬಿಡಲು ಯಾವೆಲ್ಲ ಪರ್ಯಾಯ ಮಾರ್ಗಗಳನ್ನು ಅನುಸರಿಸಬಹುದು ಎನ್ನುವ ಸಲಹೆಗಳು ಇಲ್ಲಿವೆ.

ಸಿಗರೇಟ್ ಸೇವನೆ ಮಾಡಬೇಕು ಎಂದೆನಿಸುವ ಸಂದರ್ಭದಲ್ಲಿ ಲವಂಗ, ಏಲಕ್ಕಿ ಅಥವಾ ಚೀವಿಂಗ್ ಗಮ್ ಗಳನ್ನು ತಿನ್ನುವ ಮೂಲಕ ಸಿಗರೇಟ್ ಸೇವನೆಯನ್ನು ಮರೆಯಲು ಪ್ರಯತ್ನಿಸಬಹುದು. ಮೊದಲನೆಯದಾಗಿ ಒಬ್ಬ ಧೂಮಪಾನಿ ತನ್ನ ದಿನಚರಿಯನ್ನು ಮೊದಲು ಬದಲಿಸಬೇಕು.  ರಾತ್ರಿ ಬೇಗ ನಿದ್ರಿಸಿ, ಬೆಳಗ್ಗಿನ ವೇಳೆ ಬೇಗ ಎದ್ದು, ಧ್ಯಾನ, ವ್ಯಾಯಾಮ ಮಾಡುವುದು ಮಾಡಬೇಕು. ಮುಖ್ಯವಾಗಿ ನಿಮಗೆ ಸಿಗರೇಟ್ ಸೇದ ಬೇಕು ಎಂದು ಪ್ರೇರೇಪಿಸುವ, ಹೊಟೇಲ್, ಟೀ ಅಂಗಡಿಗಳು ಮೊದಲಾದ  ಪ್ರದೇಶಕ್ಕೆ ಹೋಗುವುದನ್ನು ನಿಲ್ಲಿಸಿಬಿಡಿ. ಕಚೇರಿಗಳಲ್ಲಿಯೂ ಅಷ್ಟೇ ಸಿಗರೇಟ್ ನಿಂದ ದೂರವಿರಿ. ಸಿಗರೇಟ್ ಸೇದಲು ಪ್ರೇರೇಪಿಸುವ ಸ್ನೇಹಿತರನ್ನು ಕೂಡ ಭೇಟಿ ಮಾಡುವುದನ್ನು ಕೆಲವು ತಿಂಗಳುಗಳ ಕಾಲ ಮುಂದೂಡಿ.

ನಿಮಗೆ ಸಿಗರೇಟ್ ಸೇದಬೇಕು ಎಂದೆನಿಸಿದರೆ, ನಿಮ್ಮ ಪ್ರೀತಿ ಪಾತ್ರರನ್ನು ನೆನಪು ಮಾಡಿಕೊಳ್ಳಿ.  ನೀವು ಸಿಗರೇಟ್ ಸೇದುವುದನ್ನು ನಿಲ್ಲಿಸಬೇಕು ಎಂದು ನಿರ್ಧಾರ ಕೈಗೊಂಡ ಬಳಿಕ, ಸಿಗರೇಟ್ ಅಂಗಡಿಗಳ ಮುಂದೆ ಹೋಗುವ ವೇಳೆ ಆ ಕಡೆಗೆ ನೋಡದಿರಿ, ನೀವು ಆ ಕಡೆಗೆ ನೋಡಿದರೆ, ನಿಮಗೆ ಅರಿವಿಲ್ಲದಂತೆಯೇ ನಿಮ್ಮ ಹೆಜ್ಜೆಗಳು ಸಿಗರೇಟ್ ಅಂಗಡಿ ಬಳಿಗೆ  ಸಾಗುತ್ತವೆ.




ಸಿಗರೇಟ್ ಬಿಡಬೇಕು ಎಂದು ನಿರ್ಧರಿಸಿದ ಬಳಿಕ, ಇಂದು ಒಂದು ಸಿಗರೇಟ್ ಸೇದುತ್ತೇನೆ, ನಾಳೆಯಿಂದ ಸಂಪೂರ್ಣವಾಗಿ ನಿಲ್ಲಿಸಿ ಬಿಡುತ್ತೇನೆ ಎನ್ನುವಂತಹ ಯಾವುದೇ ಯೋಚನೆಗಳಿಗೆ ಮುಂದಾಗಬೇಡಿ. ನೀವು ಒಂದು ಬಾರಿ ಸಿಗರೇಟ್ ಸೇದುವುದನ್ನು ನಿಲ್ಲಿಸಿದ ಬಳಿಕ ಮತ್ತೆ ಅದನ್ನು ಸೇದಲು ಹೋದರೆ, ನೀವು ಮತ್ತೆ ಅದನ್ನು ನಿಲ್ಲಿಸಲು ನಿಮಗೆ ಬಹಳಷ್ಟು ಕಷ್ಟಗಳು ಆಗಬಹುದು.

ನಿಮ್ಮನ್ನು ಧೂಮಪಾನಕ್ಕೆ ಪ್ರೇರೇಪಿಸುವ ಸಮಸ್ಯೆಗಳನ್ನು ನೋಟ್ ಮಾಡಿಕೊಳ್ಳಿ. ಆ ಸಮಸ್ಯೆಗಳು ಬಂದಾಗ ಸಿಗರೇಟ್ ಸೇದದೇ ಬೇರೆ ಏನು ಮಾಡಬಹುದು ಎಂಬ ಬಗ್ಗೆ ಯೋಚಿಸಿ, ನಿರ್ಧಾರ ತೆಗೆದುಕೊಳ್ಳಿ. ಹಾಗೆಯೇ ನೀವು ಪ್ರತಿ ದಿನ 20ಕ್ಕೂ ಅಧಿಕ ಸಿಗರೇಟ್ ಸೇದುವವರಾಗಿದ್ದರೆ, ಕಡ್ಡಾಯವಾಗಿ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಲೇ ಬೇಕು.

ಸಿಗರೇಟ್ ಸೇದುವುದನ್ನು ಬಿಡುವುದರಿಂದಾಗಿ ನಿಮಗೆ ನಿಮ್ಮ ಜೀವನದಲ್ಲಿ ಉತ್ತಮ ಲಾಭವಾಗುವುದು.  ನಿಮಗೆ ಸುಖ ನಿದ್ರೆಯಾಗುತ್ತದೆ. ನಿಮ್ಮ ನಿದ್ದೆಯ ಮಟ್ಟದಲ್ಲಿ ಏರಿಕೆಯಾಗುತ್ತದೆ. ನಿಮಗೆ ಆಹಾರದ ರುಚಿ ಹಾಗೂ ಆಹಾರದ ರುಚಿಗಳು ಮೊದಲಿನಂತೆಯೇ ಸಿಗಲು ಆರಂಭವಾಗುತ್ತದೆ.  ಮುಂದಿನ ಒಂದು ವರ್ಷಗಳವರೆಗೆ ಧೂಮಪಾನ ಮಾಡುವುದು ನಿಲ್ಲಿಸಿದರೆ, ಮುಂದಿನ 10-15 ವರ್ಷಗಳಲ್ಲಿ ಆಗಬಹುದಾಗಿರುವ ಹೃದಯಾಘಾತ, ಕ್ಯಾನ್ಸರ್ ಅಥವಾ ಸ್ಟ್ರೋಕ್ ನಂತಹ ಆರೋಗ್ಯ ಸಮಸ್ಯೆಗಳಿಂದ ನೀವು ಬಿಡುಗಡೆ ಹೊಂದಬಹುದು.

ಸಿಗರೇಟ್ ಸೇವನೆ ಬಿಟ್ಟುಬಿಡುವುದರಿಂದ ನಿಮ್ಮ ಆದಾಯವೂ ಉಳಿಯುತ್ತದೆ. ಪ್ರತೀ ದಿನ 100 ರೂಪಾಯಿಗಳಿಗಿಂತಲೂ ಅಧಿಕ ಹಣವನ್ನು ನೀವು ಉಳಿಸಬಹುದು. ಇದರಿಂದ ನಿಮ್ಮ ಕುಟುಂಬಕ್ಕೆ ಕೂಡ ನೆರವಾಗುತ್ತದೆ. ನಿಮಗೆ ಅಪಾಯ ಉಂಟು ಮಾಡುವ ಸಿಗರೇಟ್ ನ್ನು ಬಿಡಲು ಮುಖ್ಯವಾಗಿ ನಿಮಗೆ ಮನೋಸ್ಥೈರ್ಯ ಅಗತ್ಯ, ನಿಮ್ಮ ದೇಹವನ್ನು ಸಿಗರೇಟ್ ಹೇಳುವಂತೆ ಕೇಳಲು ಬಿಡದೇ ನೀವು ಹೇಳುವಂತೆ ಕೇಳಲು ಪ್ರಯತ್ನಿಸಿ, ನಿಮ್ಮ ಶರೀರವನ್ನು ನೀವು ನಿಯಂತ್ರಿಸಿದರೆ, ಸಿಗರೇಟ್ ನ್ನು ನೀವು ನಿಯಂತ್ರಿಸಿದಂತೆಯೇ ಸರಿ. ಇಂದಿನಿಂದಲೇ ಸಿಗರೇಟ್ ಬಿಡುವ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಿ. ಕೇವಲ ನಿಮಗಾಗಿ ಮಾತ್ರವೇ ಅಲ್ಲ, ನಿಮ್ಮ ಪ್ರೀತಿ ಪಾತ್ರರಿಗಾಗಿಯೂ ಕೂಡ.

ಇತ್ತೀಚಿನ ಸುದ್ದಿ