ತಂದೆ ತಾಯಿ ಕೊರೊನಾಕ್ಕೆ ಬಲಿ: ಮಗುವನ್ನು ದತ್ತುಪಡೆದ ಮಗುವಿನ ಚಿಕ್ಕಮ್ಮ
15/05/2021
ಚಾಮರಾಜನಗರ: ಕೊರೊನಾದಿಂದ ತಂದೆ ತಾಯಿ ಮೃತಪಟ್ಟ 4 ವರ್ಷದ ಬಾಲಕಿಯನ್ನು ಚಿಕ್ಕಮ್ಮನೇ ದತ್ತು ಪಡೆದುಕೊಂಡ ಘಟನೆ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದ್ದು, ಇದೇ ಗ್ರಾಮದ ಗುರುಪ್ರಸಾದ್ ಹಾಗೂ ರಶ್ಮಿ ದಂಪತಿ ಕೊವಿಡ್ ನಿಂದ ಮೇ 10ರಂದು ಮೃತಪಟ್ಟಿದ್ದರು. ಇವರ 4 ವರ್ಷದ ಮಗು ಅನಾಥವಾಗಿತ್ತು.
ದಂಪತಿ ಮೃತಪಟ್ಟ ಬಳಿಕ ದಂಪತಿಯ ಮಗಳು ಅಜ್ಜಿಯ ಆರೈಕೆಯಲ್ಲಿದ್ದಳು. ಈ ನಡುವೆ ಮೃತ ರಶ್ಮಿ ತನ್ನ ಸಾವಿಗೂ ಕೆಲವು ನಿಮಿಷಗಳ ಮುಂದೆ ತನ್ನ ಬಳಿಯಲ್ಲಿ ಮಗುವನ್ನು ನೋಡಿಕೊಳ್ಳುವಂತೆ ಹೇಳಿದ್ದರು ಎಂದು ರಶ್ಮಿಯ ಸಹೋದರಿ ರಮ್ಯಾ ತಿಳಿಸಿದ್ದಾರೆ. ಅವರ ಪತಿ ಮಹದೇವ ಸ್ವಾಮಿ ಅವರು ಕೂಡ ಮಗುವನ್ನು ದತ್ತು ಪಡೆಯಲು ಮುಂದಾಗಿದ್ದಾರೆ.
ಮಕ್ಕಳ ಕಾಯ್ದೆ ಪ್ರಕಾರ ರಕ್ತ ಸಂಬಂಧಿಗಳು ಮಗುವನ್ನು ದತ್ತುಪಡೆಯಲು ಅರ್ಹರಾಗಿದ್ದು, ಅದರಂತೆಯೇ ಮಗುವನ್ನು ಅಧಿಕೃತವಾಗಿ ರಮ್ಯಾ-ಮಹಾದೇವಸ್ವಾಮಿ ದಂಪತಿಗೆ ದತ್ತು ನೀಡಲಾಗಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಗೋವಿಂದ ರಾಜು ತಿಳಿಸಿದ್ದಾರೆ.