ತನ್ನ ಮಗುವನ್ನೇ ಅಪಹರಿಸಿ ಕೊಂದಾತನಿಗೆ ಗಲ್ಲು ಶಿಕ್ಷೆ! - Mahanayaka
11:16 AM Thursday 12 - December 2024

ತನ್ನ ಮಗುವನ್ನೇ ಅಪಹರಿಸಿ ಕೊಂದಾತನಿಗೆ ಗಲ್ಲು ಶಿಕ್ಷೆ!

19/02/2021

ಗದಗ: ತನ್ನ ಮಗುವನ್ನೇ ಅಪಹರಿಸಿ ಹತ್ಯೆ ಮಾಡಿದ್ದ ಪ್ರಕರಣದ ಆರೋಪಿ ತಂದೆಗೆ  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದ್ದು,  ರೋಣ ತಾಲೂಕಿನ ಹುಲ್ಲೂರ ಗ್ರಾಮದ ಪ್ರಶಾಂತ್ ಗೌಡ ಪಾಟೀಲ್ ಮರಣ ದಂಡನೆ ಶಿಕ್ಷೆಗೊಳಗಾದವನಾಗಿದ್ದಾನೆ.

2013ರಲ್ಲಿ ಯುವತಿಯೋರ್ವಳನ್ನು ಪ್ರೀತಿಸಿ ಮದುವೆಯಾಗಿದ್ದ ಪ್ರಶಾಂತ್ ಗೌಡ, ಆಕೆ ಗರ್ಭಿಣಿಯಾಗುತ್ತಿದ್ದಂತೆಯೇ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದ. ಈತನ ಕಿರುಕುಳದಿಂದ ನೊಂದ ಪತ್ನಿ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಳು. ಅಲ್ಲಿ ಆಕೆಗೆ  ಹೆಣ್ಣುಮಗು ಜನಿಸಿತ್ತು. ಇದಾದ ಬಳಿಕ, ಸಾಂತ್ವನ ಕೇಂದ್ರದವರು ಪತಿಯನ್ನು ಕರೆಸಿ ಬುದ್ಧಿವಾದ ಹೇಳಿ ಆತನ ಜೊತೆಗೆ ಪತ್ನಿಯನ್ನು ಕಳುಹಿಸಿದ್ದರು.

ಈ ಘಟನೆ ನಡೆದ ಬಳಿಕ ರೋಣ ಪಟ್ಟಣದ ಸಿದ್ಧರೂಢ ಮಠದ ಬಳಿ ಬಾಡಿಗೆ ಮನೆಯಲ್ಲಿ ಪತ್ನಿ-ಮಗು ಜೊತೆಗೆ ಪ್ರಶಾಂತ್ ಗೌಡ ವಾಸವಿದ್ದ. ಆ ಬಳಿಕ ಸಾಂತ್ವನ ಕೇಂದ್ರದಲ್ಲಿ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯುವಂತೆ ಪತ್ನಿಗೆ  ಕಿರುಕುಳ ನೀಡಿದ್ದ.

ಈತನ ನಡವಳಿಕೆಯಿಂದ ಬೇಸತ್ತ ಪತ್ನಿ, ತನ್ನ ಮಗುವಿಗೆ ಜೀವನಾಂಶ ಕೊಡಿಸುವಂತೆ ಕೋರ್ಟ್ ಮೊರೆ ಹೋಗಿದ್ದಳು. ಜೀವನಾಂಶ ಕೇಳಿದ್ದಕ್ಕೆ ಕೋಪಗೊಂಡ ಪ್ರಶಾಂತ್ 2015ರ ಏಪ್ರಿಲ್ 6ರಂದು ಮಗುವನ್ನು ಅಪಹರಣ ಮಾಡಿ ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಗುಡ್ಡದಲ್ಲಿ ಹತ್ಯೆ ಮಾಡಿದ್ದ.

ಇದೀಗ ಮಗುವನ್ನು ಕೊಂದದ್ದು ಈತನೇ ಎಂದು ಕೋರ್ಟ್ ನಲ್ಲಿ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ರಾಜಶೇಖರ ವಿ.ಪಾಟೀಲ್ ಅಪರಾಧಿಗೆ ಮರಣ ದಂಡನೆ ವಿಧಿಸಿ ಆದೇಶ ನೀಡಿದ್ದಾರೆ.

ಇತ್ತೀಚಿನ ಸುದ್ದಿ