11 ತಿಂಗಳ ಮಗುವನ್ನು ನೇಣಿಗೇರಿಸಿ ತಾಯಿ ಆತ್ಮಹತ್ಯೆ | ಆ ಒಂದು ಕಾರಣಕ್ಕೆ ನೊಂದಿದ್ದ ತಾಯಿ!
ದಾವಣಗೆರೆ: 11 ತಿಂಗಳ ಮಗುವನ್ನು ನೇಣಿಗೇರಿಸಿ ತಾಯಿ ಕೂಡ ನೇಣಿಗೆ ಶರಣಾಗಿರುವ ಘಟನೆ ದಾವಣಗೆರೆಯ ಚನ್ನಗಿರಿ ತಾಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ಇಂದು ಸಂಭವಿಸಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
26 ವರ್ಷದ ಶ್ವೇತಾ ಹಾಗೂ ಅವರ ಕಿರಿಯ ಪುತ್ರಿ ಜಾಹ್ನವಿ ಮೃತಪಟ್ಟವರು. ಇಂದು ಬೆಳಗ್ಗೆ ಮನೆಯ ಮುಂದೆ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಶ್ವೇತಾ ಅವರ ತಂದೆ ಕಾಮಗಾರಿ ಮಾಡಿಸುತ್ತಿದ್ದರು. ಶ್ವೇತಾಳ ಹಿರಿಯ ಮಗಳು ಯಶಸ್ವಿನಿಯನ್ನು ಅಜ್ಜಿ ತೋಟದ ಪೂಜೆಗೆ ಕರೆದುಕೊಂಡು ಹೋಗಿದ್ದರು.
ಇತ್ತ ಮನೆಯಲ್ಲಿ ತಾಯಿ ಶ್ವೇತಾ ಹಾಗೂ 11 ತಿಂಗಳ ಮಗಳು ಜಾಗ್ನವಿ ಮಾತ್ರವೇ ಇದ್ದರು. ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿದ್ದ ಶ್ವೇತಾ ಅವರ ತಂದೆ ಬಾಯಾರಿಕೆಯಿಂದ ನೀರು ಕುಡಿಯಲು ಮನೆಗೆ ಬಂದಿದ್ದು, ಈ ವೇಳೆ ಅಟ್ಟದಲ್ಲಿ ಮಗುವನ್ನು ನೇಣಿಗೆ ಹಾಕಿರುವ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ. ಆ ಬಳಿಕ ಶ್ವೇತಾ ಕೂಡ ನೇಣಿಗೆ ಶರಣಾಗಿರುವುದನ್ನು ನೋಡಿದ್ದಾರೆ.
ಕೆಲವು ತಿಂಗಳುಗಳಿಂದ ಶ್ವೇತ ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದರಿಂದ ನೊಂದು ಅವರು ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇನ್ನೂ ಪ್ರಪಂಚವೇ ಅರಿಯದ 11 ತಿಂಗಳ ಮಗು ನೇಣಿನಲ್ಲಿ ನೇತಾಡುತ್ತಿರುವುದನ್ನು ನೋಡಲು ಯಾರಿಂದಲೂ ಸಾಧ್ಯವಾಗಲಿಲ್ಲ.
ಘಟನೆ ಸಂಬಂಧ ಶ್ವೇತಾಳ ತಂದೆ ತಿಮ್ಮಪ್ಪ ಸಂತೆ ಬೆನ್ನೂರು ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಚನ್ನಗಿರಿ ಉಪವಿಭಾಗಾಧಿಕಾರಿ ಡಿವೈಎಸ್ ಪಿ ಬಸವರಾಜ್, ಸಿಪಿಐ ಆರ್ ಆರ್ ಪಾಟೀಲ್, ತಹಶೀಲ್ದಾರ್ ಪಟ್ಟರಾಜ್ ಗೌಡ, ಪಿಎಸ್ ಐ ಶಿವರುದ್ರಪ್ಪ ಮೇಟಿ ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.