ಟೆರೇಸ್ ನಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿಯ ದಾರುಣ ಸಾವು
ತಿರುವನಂತಪುರಂ: ಟೆರೇಸ್ ನಲ್ಲಿ ಆಟವಾಡುತ್ತಿದ್ದ ವೇಳೆ ಮಗು ಮೇಲಿನಿಂದ ಕೆಳಗೆ ಬಿದ್ದಿದ್ದು, ಈ ವೇಳೆ ಮಗುವನ್ನು ರಕ್ಷಿಸಲು ಹೋದ ತಾಯಿ ಟೆರೇಸ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
25 ವರ್ಷ ವಯಸ್ಸಿನ ನೀಮಾ ಎಂಬವರು ಮೃತಪಟ್ಟವರಾಗಿದ್ದು, ಗುರುವಾರ ಈ ಘಟನೆ ನಡೆದಿದೆ. ತಿರುವನಂತಪುರಂನ ಎಡವಾದಲ್ಲಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಬಳಿಯ ನೂಲ್ ಜಲಾಲ್ ರೆಸಿಡೆನ್ಸಿಯ ಮೂರು ಅಂತಸ್ತಿನ ಫ್ಲ್ಯಾಟ್ ನಲ್ಲಿ ಈ ಘಟನೆ ನಡೆದಿದೆ. ನೀಮಾ ಅವರ ಪತಿ ಅಬು ಫಜಲ್ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.
ನೀಮಾ ತನ್ನ ಆರು ತಿಂಗಳ ಮಗು ನಿಫಾ ಜೊತೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಆಟವಾಡಲು ಟೆರೇಸ್ ಮೇಲೆ ಹೋಗಿದ್ದಾರೆ. ಆದರೆ ಮಗು ಆಕೆಯ ಕೈಯಿಂದ ಜಾರಿ ಗ್ರಿಲ್ ಮೂಲಕ ಕೆಳಗೆ ಬಿದ್ದಿತು. ಗಾಬರಿಗೊಂಡ ನೀಮಾ ಕೂಡ ಮಗುವನ್ನು ಉಳಿಸುವ ಪ್ರಯತ್ನದಲ್ಲಿ ಟೆರೇಸ್‌ನಿಂದ ಹಾರಿದ್ದಾರೆ. ಆದರೆ ಕೆಳಗೆ ಬಿದ್ದ ನೀಮಾ ತಲೆಗೆ ತೀವ್ರವಾದ ಗಾಯಗಳಾಗಿದೆ.
ನೀಮಾ ಅವರ ಜೊತೆಗೆ ಮಗು ಕೂಡ ಟೇರೇಸ್ ನಿಂದ ಕೆಳಗೆ ಬಿದ್ದಿದೆ. ಆದರೆ, ರಾಶಿ ಹಾಕಿದ್ದ ವೇಸ್ಟ್ ಬಟ್ಟೆಗಳ ಮೇಲೆ ಮಗು ಬಿದ್ದಿದ್ದರಿಂದಾಗಿ ಸಣ್ಣ ಪುಟ್ಟಗಾಯಗಳಿಂದ ಮಗು ಅಪಾಯದಿಂದ ಪಾರಾಗಿದೆ. ದುರದೃಷ್ಟವಶಾತ್ ಗಂಭೀರವಾಗಿ ಗಾಯಗೊಂಡಿರುವ ನೀಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.