(ಮಹಾಘಟಬಂಧನ್ –2 ) ಇಂಡಿಯಾ ವರ್ಸಸ್ ಎನ್ ಡಿ ಎ
- ಮಲ್ಲತ್ತಹಳ್ಳಿ ಡಾ.ಎಚ್.ತುಕಾರಾಂ
2024 ರ ಲೋಕಸಭಾ ಚುನಾವಣೆಗೆ ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಭರದ ಸಿದ್ಧತೆ ನಡೆಸಿವೆ. ಸತತ ಎರಡು ಬಾರಿ ನಿರಾಯಾಸವಾಗಿ ಗೆದ್ದು ಬೀಗಿದ್ದ ಬಿಜೆಪಿಗೆ ಈ ಬಾರಿ ಸ್ವಲ್ಪ ತ್ರಾಸವಾದೀತು. ನಮ್ಮ ಜನ 3ನೇ ಬಾರಿಗೆ ಒಂದೇ ಪಕ್ಷವನ್ನು ಆರಿಸಿ ಕಳಿಸಿರುವುದು ಕಡಿಮೆ. ಈ ಸತ್ಯ ಬಿಜೆಪಿಗೂ ಗೊತ್ತಿರುವಂತಿದೆ. ಆ ನಿಟ್ಟಿನಲ್ಲಿ ತನ್ನ ಹಳೆಯ ಸ್ನೇಹಿತರೆನ್ನೆಲ್ಲಾ ಒಂದು ಕಡೆ ಸೇರಿಸಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಕಾರಣ ಇತ್ತೀಚೆಗೆ ನಡೆದ ಕೆಲವು ರಾಜ್ಯ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರಮೋದಿ ಮತ್ತು ಚಾಣಕ್ಯರೆಂದೇ ಖ್ಯಾತರಾದ ಅಮಿತ್ ಷಾ ರೋಡ್ ಶೋ, ಪ್ರಚಾರ ಯಾವುದೇ ಉತ್ತಮ ಫಲಿತಾಂಶವನ್ನು ತಂದುಕೊಟ್ಟಿಲ್ಲದಿರುವುದು ಆತಂಕಕ್ಕೆ ಈಡು ಮಾಡಿದೆ. ಕರ್ನಾಟಕದಲ್ಲಿ ತಮ್ಮ ಸರ್ಕಾರದ ತಪ್ಪು ನಿರ್ಧಾರಗಳು, ಹಿಡಿತವಿಲ್ಲದ ಆಡಳಿತದಿಂದ ಸೋತು ಸುಣ್ಣವಾಗಿರುವ ಬಿಜೆಪಿ ಪಕ್ಷ ಸದನದಲ್ಲಿ ವಿರೋಧ ಪಕ್ಷದ ನಾಯಕರಿಲ್ಲದೆ ಮುಖಭಂಗವನ್ನು ಅನುಭವಿಸುತ್ತಿದೆ.
ಈ ಮಧ್ಯೆ ಬಿಜೆಪಿಯೇತರ ವಿರೋಧಪಕ್ಷಗಳು ಮಹಾಘಟಬಂಧನ್–02 ಹೆಸರಿನಲ್ಲಿ ದೇಶದ ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಒಂದೆಡೆ ಕಲೆಹಾಕಿ ಬೆಂಗಳೂರಿನಲ್ಲಿ ದಿನಾಂಕ: 17 ಮತ್ತು 18 ರ ಜುಲೈ ತಿಂಗಳಿನಲ್ಲಿ ಖಾಸಗಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಮುಖ್ಯವಾದ ಸಭೆ ನಡೆಸಲಾಯಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ರೂಪಿಸಲು ಸುಮಾರು 26 ಕ್ಕೂ ಹೆಚ್ಚು ಸುಮಾರು 40 ಕ್ಕಿಂತ ಹೆಚ್ಚು ಬಿಜೆಪಿ ವಿರೋಧಿ ಪಕ್ಷಗಳ ನಾಯಕರು ಎರಡು ದಿನ ಸಭೆ ನಡೆಸಿದರು. ಬೇರೆ ಬೇರೆ ರಾಜ್ಯದ ಮುಖ್ಯಮಂತ್ರಿಗಳು, ಪ್ರಭಾವಿ ನಾಯಕರು ಭಾಗವಹಿಸಿದ್ದರು. ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಅಜಿತ್ ಪವಾರ್, ಲಲೂ ಪ್ರಸಾದ್ ಯಾದವ್, ಉಧ್ಬವ್ ಠಾಕ್ರೆ, ಕೇಜ್ರೀವಾಲ್, ಅಖಿಲೇಶ್ ಯಾದವ್, ಈ ಸಭೆಯ ಜವಾಬ್ದಾರಿ ವಹಿಸಿದ್ದವರು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿ. ಈ ಒಕ್ಕೂಟಕ್ಕೆ ಇಂಡಿಯಾ ಎಂಬ ವಿಶಿಷ್ಟ ಹೆಸರನ್ನು ನಾಮಕರಣ ಮಾಡಿದೆ. ಯಾರು ಇದನ್ನು ಮುಂದುವರೆಸಬೇಕೆಂಬ ಬಗ್ಗೆ ಒಮ್ಮತ ಮೂಡಿಲ್ಲ. ಆದರೆ ಕಾಂಗ್ರೆಸ್ ತಾನೇ ಪ್ರಧಾನಮಂತ್ರಿ ಸ್ಥಾನ ಪಡೆಯಬೇಕೆಂಬ ಆಸೆಯನ್ನು ಹೊಂದಿಲ್ಲ ಎಂಬುದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಮಾತುಗಳಲ್ಲಿ ವ್ಯಕ್ತವಾಗಿದೆ.
ಮಹಾಘಟಬಂಧನ್ –2 ಸಭೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಸೋತು ಎರಡನೇ ಮತ್ತು ಮೂರನೇ ಸ್ಥಾನ ತಲುಪಿದ ಬಿಜೆಪಿ ಮತ್ತು ಜೆಡಿಎಸ್ ವ್ಯಂಗ್ಯವಾಡಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್ ಸರ್ಕಾರ ಬಂದು ಎರಡು ತಿಂಗಳಾಯಿತು 42 ಜನ ರೈತರು ಸಾವನ್ನಪ್ಪಿದ್ದಾರೆ ರೈತರ ಸಮಾಧಿ ಮೇಲೆ ಏನೋ ತುಂಬಾ ಸಾಧಿಸಿದ್ದೇವೆಂದು ಸಭೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಮಾಜಿ ಸಚಿವರು ಇದೊಂದು ಫೋಟೋ ಶೂಟ್ ಅಷ್ಟೇ. ಸೇರಿದವರೆಲ್ಲಾ ಕೈ ಎತ್ತಿ ಒಂದು ಫೋಟೋ ತೆಗೆಸಿಕೊಳ್ಳೋದೆ ಅಷ್ಟೇ. ಆ ಸಭೆಯಿಂದ ಇನ್ನೇನು ಸಾಧ್ಯ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಯತ್ನಾಳ್ ರವರು “ ಲೂಟಿಕೋರರೆಲ್ಲಾ ಒಂದೆಡೆ ಸೇರಿದ್ದಾರೆ” ಎಂದು ತಮ್ಮ ಕಡಿಮೆ ದರ್ಜೆಯ ಭಾಷೆಯನ್ನು ಬಳಸಿ ಹಂಗಿಸಿದ್ದಾರೆ. ಸ್ವತ: ಪ್ರಧಾನಿಗಳೇ ಅಲ್ಲಿ ಸೇರಿರುವವರೆಲ್ಲ “ ಭ್ರಷ್ಟಾಚಾರಿಗಳು: ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತ ಮಾತುಗಳು ವಿರೋಧ ಪಕ್ಷದವರಿಂದ ನಿರೀಕ್ಷಿಸಬಹುದಾದವುಗಳೇ.
ನಾವುಗಳೂ ನಿಮಗೇನು ಕಡಿಮೆ ಇಲ್ಲ ಎಂಬಂತೆ ಸುಮಾರು 39 ಪಕ್ಷಗಳ 60–70 ಜನ ನಾಯಕರನ್ನು ಎನ್ ಡಿ ಎ ಕೂಡ ಕಲೆಹಾಕಿ ದೆಹಲಿಯಲ್ಲಿ ಸಭೆ ನಡೆಸಿ ನಾವೂ ಒಗ್ಗಟ್ಟಾಗಿದ್ದೇವೆ ಎಂದು ಸಭೆಯನ್ನು ನಡೆಸಿದರು. ಹಳೆಯ ಸ್ನೇಹಿತರನ್ನು ಮತ್ತೆ ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ಕೈಹಾಕಿದ್ದಾರೆ. ಪ್ರಾದೇಶಿಕ ಪಕ್ಷದ ಒಂದು ಸ್ಥಾನ ಪಡೆದವರೂ ತಮಗೂ ಪ್ರಾಮುಖ್ಯತೆ ಸಿಕ್ಕಿತಲ್ಲ ಎಂದು ಬೀಗುವ ವಾತಾವರಣ ಸೃಷ್ತಿಯಾಗಿದೆ. ಅಂತೂ ಇಂತೂ 2024 ರ ಲೋಕಸಭಾ ಅಖಾಡ ಹಲವು ಮುಖ್ಯ ವಿಷಯಗಳಿಗೆ ಸಾಕ್ಷಿಯಾಗಿವೆ.
ಕಳೆದ 15 ದಿನಗಳಿಂದ ರಾಜ್ಯ ಸದನದಲ್ಲಿ ಕೇವಲ ವರ್ಗಾವಣೆ ವಿಷಯವನ್ನೇ ದಾಳವಾಗಿ ಮಾಡಿಕೊಂಡು ಸದನದ ಸಮಯವನ್ನು ಹಾಳು ಮಾಡುವುದರಲ್ಲೇ ಕಳೆದ ವಿರೋಧ ಪಕ್ಷಗಳು ಏಕೆ ಅಲ್ಲಿ ರೈತರ ಆತ್ಮಹತ್ಯೆಯ ಪ್ರಕರಣಗಳನ್ನು ಪ್ರಮುಖ ಅಸ್ತ್ರವಾಗಿ ಮಾಡಲಿಲ್ಲ. ಅದಕ್ಕೊಂದು ನಿರ್ದಿಷ್ಟವಾದ ಉತ್ತರವನ್ನು ಸರ್ಕಾರದಿಂದ ಪಡೆಯಲಿಲ್ಲ ಎಂಬ ಅನುಮಾನ ಕಾಡುತ್ತದೆ. ಕೋಟ್ಯಾಂತರ ಜನರ ಪ್ರತಿನಿಧಿಗಳಾಗಿ ಭಾಗವಹಿಸಿ ವ್ಯರ್ಥ ಕಾಲಹರಣ ಮಾಡುವ ಬದಲು ಪರಿಹಾರ ಹುಡುಕುವ ನಿಟ್ಟಿನಲ್ಲಿ ಕಾರ್ಯಕಲಾಪಗಳು ನಡೆಯಬೇಕಲ್ಲವೇ?
ವರ್ಗಾವಣೆ ಎಂಬುದು ಪ್ರತಿ ಸರ್ಕಾರ ಬಂದಾಗಲೂ ಪ್ರತಿ ವರ್ಷ ನಡೆಯುವ ಪ್ರಕ್ರಿಯೆ. ಎಲ್ಲಾ ಸರ್ಕಾರಗಳು ಎಷ್ಟೇ ವಿರೋಧಗಳು ಬಂದರೂ ಅದನ್ನು ಮಾಡಿಯೇ ತೀರುತ್ತಾರೆ. ತಮಗೆ ಬೇಕಾದವರನ್ನು ಒಳ್ಳೆಯ ಸ್ಥಳಗಳಿಗೆ, ತಮಗೆ ವಿರೋಧ ವ್ಯಕ್ತಪಡಿಸಿದ ಅಧಿಕಾರಿಗಳನ್ನು ಏನೂ ಆದಾಯ ಬರದ ಕಡೆಗೆ ನಿಯೋಜಿಸುವುದು ಸರ್ವೇ ಸಾಮಾನ್ಯ. ವರ್ಗಾವಣೆ ಮಾಡಿದರು ಎಂಬ ಕಾರಣಕ್ಕೆ ವಿಷ ಸೇವಿಸಿ ಹೆದರಿಸುವುದು, ಧಮಕಿ ಹಾಕುವುದು, ಒತ್ತಡ ಹಾಕುವುದು ಸರಿಯಾದ ಮಾರ್ಗವಲ್ಲ. ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವುದಾದರೆ ರಾಜ್ಯದ ಯಾವ ಮೂಲೆಗಾದರೂ ಸರಿ ಸಿದ್ಧನಾಗಿರಬೇಕಾದುದು ಸರ್ಕಾರಿ ನೌಕರನ ಕರ್ತವ್ಯ.
ಇನ್ನು ರೈತ ಸಾಯುವುದಾದರೂ ಏಕೆ? ಬಹುಪಾಲು ರೈತರು ಇಂದು ಶೋಕಿ ಜೀವನಕ್ಕೆ ಮಾರುಹೋಗುತ್ತಿದ್ದಾರೆ. ಯಾವುದೇ ಸರ್ಕಾರ ರೈತರಿಗೆ ವಿಶೇಷ ಯೋಜನೆಗಳನ್ನು ಕೊಟ್ಟಿದೆ. ಉಚಿತ ಕರೆಂಟ್, ಕೊಳವೆ ಬಾವಿ ತೆಗೆಸಲು ಹಣ, ಸಾಲ ನೀಡುವುದು ಹಲವಾರು ರೈತಪರ ಅನುಕೂಲಗಳನ್ನು ಸರ್ಕಾರಗಳು ಮಾಡುತ್ತಿವೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ರೈತರು ಸೋಲುತ್ತಿದ್ದಾರೆ. ಬಹುಪಾಲು ರೈತರ ಬಾಯಿಂದ ಬರುವ ಮಾತುಗಳೆಂದರೆ ಕೃಷಿಯಲ್ಲಿ ಆದಾಯವೇ ಇಲ್ಲ ಎಂದು. ಇಂದು ಟೊಮೋಟೋ ಬೆಲೆ ಯಾವ ಮಟ್ಟದಲ್ಲಿದೆ ಎಂದು ಇಡೀ ದೇಶ ನೋಡುತ್ತಿದೆ. ತರಕಾರಿಗಳ ಬೆಲೆಯೂ ಗಗನಕ್ಕೇರಿವೆ. ಇದು ರೈತರಿಗೆ ವರದಾನವಲ್ಲವೇ? ಕಷ್ಟಪಟ್ಟು ಸಮಯಕ್ಕೆ ಭೂತಾಯಿಗೆ ಏನೇನು ಕೊಡಬೇಕೋ ಅದನ್ನು ಒದಗಿಸಿದರೆ ಭೂತಾಯಿ ಖಂಡಿತ ರೈತನ ಕೈ ಬಿಡುವುದಿಲ್ಲ. ಟೊಮೋಟೊ ಬೆಳೆಗಾರರ ಕೈ ಹಿಡಿಯಲಿಲ್ಲವೇ ಭೂಮಿ. ಹಿಂದೆ ಬೆಲೆಯಿಲ್ಲದೆ ರೈತರು ತಾವು ಖರ್ಚು ಮಾಡಿದ ದುಡ್ಡೂ ಬರಲಿಲ್ಲ ಎಂದು ರಸ್ತೆಗಳಲ್ಲಿ ಸುರಿದು ಹಾಳು ಮಾಡಿದ್ದನ್ನೂ ನೋಡಿದ್ದೇವೆ ಅಲ್ಲವೇ?
ಎಷ್ಟೋ ರೈತರು ತಮ್ಮ ಭೂಮಿಯನ್ನು ಗುತ್ತಿಗೆಗೆ ಕೊಟ್ಟು ಬೆಂಗಳೂರಿನ ಯಾವುದೋ 10–15 ಸಾವಿರ ಸಂಬಳಕ್ಕೆ ಸೇರುತ್ತಿದ್ದಾರೆ. 2 ರಿಂದ 5 ಎಕರೆ ಜಮೀನು ಇರುವವರು ಕೆಲವರು ನಗರಗಳಲ್ಲಿ ವಾಸಿಸುತ್ತಿದ್ದರೆ, ನಾನೇಕೆ ಊರಲ್ಲಿ ವ್ಯವಸಾಯ ಮಾಡಲಿ ಅವನಿಗೆ ಬೇಡವಾದದ್ದು ನನಗೇಕೆ ಎಂದು ತಕ್ಕಲು ಬಿಡುತ್ತಿದ್ದಾರೆ. ಎಲ್ಲೋ ಬೆರಳಣಿಕೆಯಷ್ಟು ಜನ ಮಾತ್ರ ಬೇಸಾಯದ ಕಾಯಕದಲ್ಲಿ ತೊಡಗಿದ್ದಾರೆ. ಸರ್ಕಾರ 79 ಎ ಬಿ ನಿಯಮ ತೆಗೆದ ಮೇಲಂತೂ ಜಮೀನಿನ ವ್ಯಾಪಾರ ಜೋರಾಗಿ ಸಾಗಿದೆ. ಬೆಲೆಗಳನ್ನು ಹೆಚ್ಚಿಸುತ್ತಿದ್ದು ಶ್ರೀಮಂತರು, ಬೇರೆ ಬೇರೆ ರೀತಿಯಲ್ಲಿ ಹಣ ಸಂಪಾದಿಸಿದವರು ರೈತರ ಜಮೀನುಗಳನ್ನು ಹೆಚ್ಚು ಬೆಲೆ ಕೊಟ್ಟೇ ಖರೀದಿಸುತ್ತಿದ್ದಾರೆ. ಅಷ್ಟೊಂದು ಬೆಲೆ ಬಂತಾ ಎಂದು ದಿಗ್ಬ್ರಮೆಗೊಂಡು ಪಕ್ಕದ ರೈತನು ಇರುವ ಸ್ವಲ್ಪ ಜಮೀನಿನಲ್ಲಿ0iÉುೀ ಮಾರಿ ಐಷಾರಾಮಿಯಾಗಿ ಬದುಕಲು ಬಯಸುತ್ತಾನೆ. ಊರುಗಳಲ್ಲಿ ಇರುವ ದ್ವೇಷ, ವೈಷಮ್ಯದಿಂದಲೇ ಎಷ್ಟೋ ರೈತರು ಜಮೀನು ಮಾರಿ ಬೀದಿಪಾಲಾಗಿದ್ದಾರೆ. ತೀರಾ ಹಿಂದುಳಿದ ಗ್ರಾಮಗಳಿಗೆ ಹೆಚ್ಚಿನ ಆಮಿಷ ಒಡ್ಡಿ ಇರುವ ಎಲ್ಲಾ ಜಮೀನನ್ನು ಕಬಳಿಸಿ ನಂತರ ಅದಕ್ಕೆ ದೊಡ್ಡ ಕಾಂಪೌಂಡ್ ಹಾಕಿ, ಒಂದು ಫಾರಂ ಹೌಸ್ ಮಾಡಿಕೊಂಡು ಬದುಕುವ ಶ್ರೀಮಂತ ತನ್ನ ತೋಟ ನೋಡಿಕೊಳ್ಳಲು ತಿಂಗಳ ಸಂಬಳಕ್ಕೆ ಮೂಲ ಆ ಜಮೀನಿನ ಮಾಲೀಕರನ್ನೇ ಕಾವಲಾಗಿ ಇಡುತ್ತಾರೆ ಇದು ದುರಂತ. ಅಂತಹ ರೈತರು ಅಲ್ಲಿ ಕೆಲಸದವರಾಗಿ ದುಡಿಯುತ್ತಾರೆ ಎಂಥ ವಿಪರ್ಯಾಸ.
ಇರುವ ಒಂದೋ ಎರಡೋ ಎಕರೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಉತ್ತಮ ರೈತನಾಗಿ, ಒಳ್ಳೆಯ ವ್ಯವಸಾಯ ಮಾಡಿ ಮಾದರಿ ರೈತರಾಗಿಲ್ಲವೇ ? ಪ್ರಶಸ್ತಿ ಪಡೆದು ಬೇರೆಯವರಿಗೂ ಆದರ್ಶರಾಗಿಲ್ಲವೇ? ಕೆಲವು ರೈತರಿಗೆ ಸಾಲ ಮಾಡುವುದೆಂದರೆ ಸುಲಭ. ಇರುವ ಜಮೀನನ್ನು ತೋರಿಸಿ ಸಾಲ ಪಡೆದು ಐಷಾರಾಮಿ ಜೀವನ ನಡೆಸಿ ಸಾಲ ಕೊಟ್ಟವರಿಗೆ ಜಮೀನು ಮಾರಿರುವ ಪ್ರಸಂಗಗಳು ನೂರಾರು.
ಹಳ್ಳಿಗಳಲ್ಲಿ ಅಂತರ್ಜಲ ಕುಸಿಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. 800–1000 ಅಡಿಗಳು ಕೊರೆದರೂ ನೀರು ಸಿಗುತ್ತಿಲ್ಲ. ಏಕಿರಬಹುದು? ನನಗೆ ಅನಿಸಿದ್ದು ಸರ್ಕಾರ ರೈತರ ಪಂಪ್ ಸೆಟ್ ಬಳಕೆ ಉಚಿತವಾಗಿ ನೀಡಿದೆ. ರಾತ್ರಿ ವೇಳೆಯಲ್ಲೋ ಅಥವಾ ತಾವು ಬಿಡುವಾದಾಗ ನೀರನ್ನು ಚಲಾಯಿಸಿ ಹೋದರೆ ಮತ್ತೆ ಅದಾಗೇ ನಿಂತರೆ ಇಲ್ಲದಿದ್ದರೆ ಹಗಲೂ ರಾತ್ರಿ ಎನ್ನದೆ ಪಂಪ್ ಸೆಟ್ ಚಾಲ್ತಿಯಲ್ಲಿರುತ್ತದೆ. ಎಷ್ಟು ನೀರು ಇದ್ದರೆ ತಾನೇ ಏನು? ಭೂತಾಯ ಒಡಲು ಖಾಲಿಯಾಗುವುದಿಲ್ಲವೇ? ಮಣ್ಣಿಗೆ ವ್ಯರ್ಥವಾದ ನೀರು ಸೇರಬಹುದು ಆದರೆ ಅನವಶ್ಯಕವಾಗಿ ಪೋಲಲ್ಲವೇ? ವಿದ್ಯುತ್ ಪೋಲಲ್ಲವೇ? ಅದಕ್ಕಾಗಿಯೇ ರೈತರು ಬುದ್ಧಿವಂತಿಕೆಯಿಂದ ನೀರು ಮತ್ತು ವಿದ್ಯುತನ್ನು ಬಳಸಬೇಕು.
ಹಳ್ಳಿಗಳಲ್ಲಿ ತಮ್ಮ ಹೆಸರಿನಲ್ಲಿರುವ ಜಮೀನು ಅವರಿಗೆ ಹೆಸರು, ಆದಾಯ ಮತ್ತು ಅವರ ಶ್ರೀಮಂತಿಕೆಯನ್ನು ತೋರಿಸುವ ಒಂದು ಸಾಧನ. ಸರ್ಕಾರ ಯಾವುದೋ ಕೈಗಾರಿಕೆಗೋ, ರಸ್ತೆ ಅಭಿವೃದ್ಧಿಗೋ ಜಮೀನನ್ನು ವಶಕ್ಕೆ ಪಡೆಯುವುದು ಸಾಮಾನ್ಯ. ಕೆಲವು ಬುದ್ಧಿವಂತ ದಲ್ಲಾಳಿಗಳು ಇಲ್ಲವೇ ಶ್ರೀಮಂತರು ಸರ್ಕಾರದ ಅಧಿಕಾರಿಗಳ ಪರಿಚಯಸ್ಥರ ಮೂಲಕ ಆ ವಿಷಯ ತಿಳಿದುಕೊಂಡು ರೈತರಿಗೆ ಹೆಚ್ಚು ಹಣ ಕೊಟ್ಟು ಇಲ್ಲವೆ ರಸ್ತೆಗೋ ಅಥವಾ ಇನ್ನಾವುದೋ ಉದ್ದೇಶಕ್ಕೆ ಸರ್ಕಾರ ವಶಕ್ಕೆ ಪಡೆದರೆ ಕಡಿಮೆ ಹಣ ಬರುತ್ತದೆ ಎಂದು ತಿಳಿಸಿ ಜಮೀನು ಕಬಳಿಸುವುದು ಸಾಮಾನ್ಯವಾಗಿದೆ. ಮುಗ್ಧ ರೈತ ಇದನ್ನು ನಂಬಿ ಬಂದಷ್ಟೇ ಲಾಭ ಎಂದು ತಿಳಿದು ಮಾರಲು ಸಿದ್ಧನಾಗುತ್ತಾನೆ. ಮಾರಿದ ಜಮೀನಿನ ಹಣ ಬಂದ ರೈತ ಮೊದಲು ಮಾಡುವುದು ಒಂದು ಮನೆಯನ್ನ, ಒಂದಷ್ಟು ಎಲ್ಲರಿಗೂ ಕಾಣುವಂತೆ ಬಂಗಾರವನ್ನ ಮತ್ತು ಐಷಾರಾಮಿ ಕಾರುಗಳನ್ನು ಅಷ್ಟರಲ್ಲೇ ಹಣ ಖಾಲಿಯಾಗಿರುತ್ತದೆ. ಕೆಲವರು ತಮ್ಮ ಮನೆಗಳಲ್ಲಿನ ಮದುವೆ, ಮುಂಜಿಗಳಿಗೆ ಬಳಕೆ ಮಾಡುತ್ತಾರೆ. ಎಷ್ಟು ಜನ ತಾವು ಕಳೆದ ಜಮೀನಿಗೆ ಪರ್ಯಾಯವಾಗಿ ಬೇರೆಕಡೆ ಕಡಿಮೆ ಸಿಕ್ಕ ಕಡೆ ಜಮೀನು ತೆಗೆಯಬೇಕು, ರೈತನಾಗಿ ಮುಂದುವರಿಯಬೇಕು ಎಂದು ಬಯಸುತ್ತಾರೆ ಇದು ತೀರಾ ವಿರಳ.
ರೈತ ಈ ದೇಶದ ಬೆನ್ನಲುಬು, ಅನ್ನದಾತ. ಆತನೇ ತನ್ನ ಜಮೀನಿನಲ್ಲಿ ವ್ಯವಸಾಯ, ಬೇಸಾಯ ಅಸಾಧ್ಯ ಎಂದು ಹಿಂದೊಗೆದರೆ ಮುಂದಿನ ಗತಿ ಏನು? ಶೇಕಡಾ 70 % ಇರುವ ರೈತರ ಅನುಪಾತ ಕಡಿಮೆಯಾಗುತ್ತಾ ಹೋದರೆ ಅವರು ಬೆಳೆವ ಅನ್ನವನ್ನೇ ನಂಬಿದವರ ಇನ್ನುಳಿದವರ ಗತಿಯೇನು?
ಸರ್ಕಾರಗಳೂ ಕೂಡ ಇದರ ಕಡೆಗೆ ಯೋಚಿಸಬೇಕಾಗಿದೆ. ಉತ್ತಮ ಫಲವತ್ತಾದ ರೈತರ ಜಮೀನುಗಳನ್ನು ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ವಶಕ್ಕೆ ಪಡೆದರೆ ಆ ಸಾವಿರಾರು ರೈತರ ಕುಟುಂಬದ ಪಾಡೇನು? ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ರಾಗಿ, ಭತ್ತ, ಕಬ್ಬು, ತೆಂಗಿನಕಾಯಿ, ಮಾವಿನಹಣ್ಣು, ಇನ್ನಿತರ ಫಸಲುಗಳು ಕಡಿಮೆಯಾದರೆ ತರಕಾರಿಗಳ ಬೆಲೆ ಗಗನಕ್ಕೇರದೆ ಮತ್ತೇನು ? ಏಕೆ ಸರ್ಕಾರಗಳು ಕೈಗಾರಿಕೆಗಳಿಗೆ ಇಂತ ಫಲವತ್ತಾದ ಜಮೀನುಗಳನ್ನು ಆಯ್ದುಕೊಳ್ಳುವುದು. ವ್ಯವಸಾಯಕ್ಕೆ ಯೋಗ್ಯವಲ್ಲದ ಜಮೀನಗಳನ್ನು ಪಡೆದು ಅಲ್ಲಿ ಎಲ್ಲಾ ವ್ಯವಸ್ಥೆ ಮಾಡಲು ಕಷ್ಟವೇ?
ಪಾಪ ರೈತ ತನ್ನ ಜಮೀನಿನಲ್ಲಿ ಪಡೆದ ಸಾಲಕ್ಕೆ ಫಸಲು ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರಂತಕ್ಕೆ ಕೈ ಹಾಕುವುದು ತಪ್ಪಬೇಕು. ನೀರವ್ ಮೋದಿ. ವಿಜಯ ಮಲ್ಯ, ಲಲಿತ್ ಮೋದಿಯಂತಹ ಮೋಸ ಮಾಡಿದ ವ್ಯಕ್ತಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡುತ್ತದೆ ಸರ್ಕಾರ. ಪರೋಕ್ಷವಾಗಿ ಅವರಿಗೆ ಸಹಕಾರ ನೀಡುತ್ತವೆ ಸರ್ಕಾರಗಳು. ಅಂತಹವರು ನಾಚಿಕೆ ಇಲ್ಲದೆ ಐಷಾರಾಮಿ ಬದುಕು ನಡೆಸುತ್ತಿರುತ್ತಾರೆ. ಅಂತಹವರನ್ನು ಬಿಟ್ಟು ಅಲ್ಪಸ್ವಲ್ಪ ಕೃಷಿಗೆ ಸಾಲ ಮಾಡಿದ ರೈತರಿಗೆ ನೋಟಿಸ್ ನೀಡಿ ಮನೆಬಾಗಿಲಲ್ಲಿ ನಿಂತು ಮರ್ಯಾದೆ ತೆಗೆದು ಅವರನ್ನು ಸಾಯುವ ಸ್ಥಿತಿ ತಲುಪುವಂತೆ ಮಾಡುವ ಬ್ಯಾಂಕುಗಳಿಗೆ ತಿಳಿಯಹೇಳಿ, ಅವರನ್ನು ಸಾವಿನಿಂದ ಕಾಪಾಡಬೇಕಾದದ್ದು ಸರ್ಕಾರಗಳ ಕೆಲಸವಲ್ಲವೇ ? ತಮ್ಮದೇ ಸರ್ಕಾರವಿರುವ ಕೇಂದ್ರದವರಿಗೆ ಹೇಳಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕಾದದ್ದು ವಿರೋಧ ಪಕ್ಷದ ಕೆಲಸವಲ್ಲವೇ? ರಾಷ್ಟ್ರೀಕೃತ ಬ್ಯಾಂಕುಗಳು ಕೆಂದ್ರದ ಅಧೀನದಲ್ಲಿವೆ. ರೈತರಿಗೆ ಆಗುತ್ತಿರುವ ಹಿಂಸೆಯನ್ನು ಸರಿಪಡಿಸಲು ಹೋರಾಟ ನಡೆಸಬೇಕಲ್ಲವೇ? ಸದನ ತಮ್ಮ ವಯಕ್ತಿಕ ಹಿತಾಸಕ್ತಿಗಳಿಗೆ ಬಲಿಯಾಗದೆ ಬಹುಪಾಲು ಜನರ ಆಶೋತ್ತರಗಳ ಸಮಸ್ಯೆಗಳ ಪರಿಹಾರ ಕಂಡುಹಿಡಿಯಲು ಬಳಸಬಹುದಲ್ಲವೇ?
ಒಂದು ಸರ್ಕಾರದ ವಿರುದ್ದ ವಿರೋಧ ಪಕ್ಷಗಳಾಗಿದ್ದೇವೆ ಎಂಬ ಮಾತ್ರಕ್ಕೆ ಆರೋಪ ಮಾಡುವುದಕ್ಕಿಂತ ರೈತರೇ ಸಾವಿನಂತಹ ಯೋಚನೆ ಮಾಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಬಹುದಲ್ಲವೇ? ರೈತ ಯಾವುದೋ ಪಕ್ಷದ ಅಭಿಮಾನಿ ಇರಬಹುದು. ಆದರೆ ಎಲ್ಲರಿಗೂ ಬೇಕಾದವ ರೈತ. ಅನ್ನದಾತನಿಂದ ಮಾತ್ರ ದೇಶ ಎಂಬುದನ್ನು ಎಲ್ಲಾ ಪಕ್ಷಗಳೂ ಅರಿತುಕೊಳ್ಳಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw