ಆರೋಪಿ ಶೇರ್ ಮಾಡಿಕೊಂಡಿದ್ದ ಪೋಸ್ಟ್ ನಲ್ಲಿತ್ತಾ ಕೊಲೆಯ ಮುನ್ಸೂಚನೆ?
ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಡಾ. ಚಂದ್ರಶೇಖರ್ ಗುರೂಜಿ ಹತ್ಯೆಯ ಬೆನ್ನಲ್ಲೇ ಆರೋಪಿಗಳಲ್ಲಿ ಓರ್ವನಾದ ಮಹಾಂತೇಶ್ ಶಿರೂರನ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿರುವ ಪೋಸ್ಟ್ ಎಲ್ಲರ ಗಮನ ಸೆಳೆದಿದ್ದು, 5 ದಿನಗಳ ಹಿಂದೆಯೇ ಹತ್ಯೆಯ ಮುನ್ಸೂಚನೆಯನ್ನು ಆರೋಪಿ ನೀಡಿದ್ದ ಎನ್ನುವ ಚರ್ಚೆಗಳಿಗೆ ಕಾರಣವಾಗಿದೆ.
ಅಧರ್ಮ ತಾಂಡವವಾಡುತ್ತಿರುವಾಗ, ದುಷ್ಟರನ್ನ ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು… ಇನ್ನು ವಿಳಂಬ ಏಕೆ ಭಗವಂತ? ಆದಷ್ಟು ಬೇಗ ಅವತರಿಸು ಪ್ರಭು..! ಸಂಭವಾಮಿ ಯುಗೇ… ಯುಗೇ.. ಎಂಬ ಪೋಸ್ಟ್ ನ್ನು ಆರೋಪಿಯು ಶೇರ್ ಮಾಡಿದ್ದು, ಈ ಪೋಸ್ಟ್ ಇದೀಗ ಚಂದ್ರಶೇಖರ್ ಗುರೂಜಿ ಹತ್ಯೆಯ ಬೆನ್ನಲ್ಲೇ ವಿವಿಧ ಅರ್ಥಗಳನ್ನು ಪಡೆದುಕೊಂಡಿದೆ.
ಚಂದ್ರಶೇಖರ್ ಗುರೂಜಿ ಹತ್ಯೆಯ ಬಳಿಕ ತಲೆಮರೆಸಿಕೊಳ್ಳುವ ಪ್ರಯತ್ನದಲ್ಲಿದ್ದ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ಪೈಕಿ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ಮಹಾಂತೇಶ್ ಶಿರೂರ ಖಾತೆಯಲ್ಲಿ ಈ ಪೋಸ್ಟ್ ಶೇರ್ ಮಾಡಿಕೊಂಡಿರುವುದು ಕಂಡು ಬಂದಿದೆ.