ಮಹತ್ವ ಕಳೆದುಕೊಂಡ ನಿಷೇಧ ಅಭಿಯಾನಗಳು:  ಕೆಲವರ ಪ್ರಚಾರಕ್ಕಾಗಿ ನಡೆಯಿತೇ ನಿಷೇಧ ಅಭಿಯಾನ? - Mahanayaka
3:26 AM Thursday 19 - September 2024

ಮಹತ್ವ ಕಳೆದುಕೊಂಡ ನಿಷೇಧ ಅಭಿಯಾನಗಳು:  ಕೆಲವರ ಪ್ರಚಾರಕ್ಕಾಗಿ ನಡೆಯಿತೇ ನಿಷೇಧ ಅಭಿಯಾನ?

bangalore
25/04/2022

ಬೆಂಗಳೂರು: ರಾಜ್ಯದಲ್ಲಿ ಹಲವಾರು ದಿನಗಳಿಂದ ಭಾರೀ ಸದ್ದು ಮಾಡಿದ್ದ, ನಿಷೇಧ ಅಭಿಯಾನಗಳು ಮಹತ್ವ ಕಳೆದುಕೊಂಡಿದ್ದು, ಅಭಿಯಾನ ಆರಂಭಿಸಿದವರ ನಿರೀಕ್ಷೆ ಸುಳ್ಳಾಗಿದೆ.

ಹೌದು..! ಹಿಜಾಬ್ ನಿಷೇಧಕ್ಕೆ ಆರಂಭವಾದ ಅಭಿಯಾನದಲ್ಲಿ ಸರ್ಕಾರ ಕೂಡ ಒಳಗೊಂಡಿದ್ದರಿಂದಾಗಿ ಮುಸ್ಲಿಮ್ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದಿಂದ ವಂಚಿತರಾಗುವಂತಹ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿತ್ತು. ಆದರೂ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ.  ಹಿಜಾಬ್ ವಿಚಾರವಾಗಿ ಆರಂಭಗೊಂಡ ವಿವಾದವನ್ನು ಕೆಲವರು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡು ವಿವಾದಿತ ಹೇಳಿಕೆಗಳನ್ನು ನೀಡಿರುವುದು ಕೂಡ ಕಂಡು ಬಂದಿತ್ತು.

ಮುಸ್ಲಿಮರನ್ನು ವಿರೋಧಿಸಿದರೆ, ಬಿಜೆಪಿ ನಾಯಕರನ್ನು ಮೆಚ್ಚಿಸಬಹುದು ಎನ್ನುವ ಭಾವನೆಗಳು ಈ ನಿಷೇಧ ಅಭಿಯಾನದ ಹಿಂದಿದೆ ಎನ್ನುವ ಚರ್ಚೆಗಳು ಕೇಳಿ ಬಂದಿವೆ.  ಜನಪ್ರಿಯತೆ ಕಳೆದುಕೊಂಡವರೆಲ್ಲರೂ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆದುಕೊಂಡರು. ಇದು ಸ್ವತಃ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಂತೂ ಸತ್ಯ.


Provided by

ಮೊದಮೊದಲಿಗೆ ಈ ನಿಷೇಧ ಅಭಿಯಾನ ಬಿಜೆಪಿಗೆ ಪ್ರಚಾರ ನೀಡುತ್ತಿದೆ ಎಂದೇ ಭಾವಿಸಲಾಗಿತ್ತು. ಆದರೆ, ಇದರ ಪ್ರಚಾರವು ಬದಿಗೆ ಸರಿದು ಹೋಗಿದ್ದ  ಪ್ರಮೋದ್ ಮುತಾಲಿಕ್  ಮತ್ತು ಕಾಳಿ ಸ್ವಾಮಿ, ಪುನೀತ್ ಕೆರೆ ಹಳ್ಳಿ, ಪ್ರಶಾಂತ್ ಸಂಬರ್ಗಿಯಂತಹವರಿಗೆ ಹೆಚ್ಚಿನ ಪ್ರಚಾರ ನೀಡಿತು. ಮಾತ್ರವಲ್ಲದೇ ರಾಜ್ಯದಲ್ಲಿಇದರಿಂದ ಅಶಾಂತಿಯ ವಾತಾವರಣ ಕೂಡ ಸೃಷ್ಟಿಯಾಯಿತು.

ಹಿಜಾಬ್ ನಿಂದ ಆರಂಭಗೊಂಡ ನಿಷೇಧ ಅಭಿಯಾನಗಳು, ವ್ಯಾಪಾರಕ್ಕೆ ನಿಷೇಧ, ಹಲಾಲ್ ಕಟ್ ಜಟ್ಕಾ ಕಟ್ ಮೊದಲಾದ ನಿಷೇಧ ಕಾರ್ಯಕ್ರಮದವರೆಗೆ ತಲುಪಿ ಇದೀಗ ಅಕ್ಷಯ ತೃತೀಯದಲ್ಲಿ ಚಿನ್ನಾಭರಣ ಖರೀದಿಸಲು ಹಿಂದೂಗಳ ಚಿನ್ನದಂಗಡಿಗಳನ್ನೇ ಬಳಸಿ ಎನ್ನುವ ಮಟ್ಟಕ್ಕೆ ಬೆಳೆದಿದೆ. ಆದರೆ, ನಿಷೇಧ ಅಭಿಯಾನಗಳು ಮೇಲ್ನೋಟಕ್ಕೆ ಯಶಸ್ವಿಯಾಗಿ ಕಂಡು ಬಂದರೂ, ಇದಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ ಎನ್ನುವುದೇ ಸತ್ಯಾಂಶವಾಗಿದೆ.

ಗ್ರಾಮೀಣ ಭಾಗದಲ್ಲಿ ಈ ಅಭಿಯಾನಗಳಿಗೆ ಯಾವುದೇ ಮಹತ್ವ ದೊರೆತಿಲ್ಲ. ವ್ಯಾಪಾರವಹಿವಾಟುಗಳ ಮಧ್ಯೆ ಧರ್ಮವನ್ನು ತಂದಿಟ್ಟಿರುವುದರಿಂದ  ಜನರ ನಡುವಿನ ಬಾಂಧವ್ಯಕ್ಕೆ ಮಾತ್ರವಲ್ಲ. ಜನರ ನಡುವಿನ ವ್ಯವಹಾರಗಳಿಗೂ ತೊಂದರೆಯಾಗಬಹುದು. ಜಟ್ಕಾ ಕಟ್ ವಿವಾದಿಂದಾಗಿ ನಷ್ಟವಾಗಿರೋದು ಮುಸ್ಲಿಮರಿಗೆ ಎಂದು ಮಾಧ್ಯಮಗಳು ಬಿಂಬಿಸುತ್ತಿದೆ. ಆದರೆ ವಾಸ್ತವವಾಗಿ  ಹಿಂದೂಗಳಿಗೂ ಇದರಿಂದ ತೀವ್ರ ನಷ್ಟವಾಗಿದೆ. ಮುಸ್ಲಿಮ್ ವ್ಯಾಪಾರಿಗಳು ಹಿಂದೂಗಳಿಂದ ಕುರಿಗಳನ್ನು ಖರೀದಿಸುತ್ತಾರೆ. ಬಳಿಕ ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ. ಈ ಬಾರಿ ಕೆಲಸವಿಲ್ಲದ ಕೆಲವರು ಜಟ್ಕಾಕಟ್ ಎಂಬ ವಿವಾದವನ್ನು ತಂದಿಟ್ಟಿದ್ದರಿಂದಾಗಿ ಮುಸ್ಲಿಮರು ವ್ಯಾಪಾರವಾಗಲಿಕಿಲ್ಲ ಎಂಬ ಭೀತಿಯಿಂದ ಹೆಚ್ಚು ಕುರಿಗಳನ್ನು ಖರೀದಿಸಿಲ್ಲ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ರೈತರಿಗೆ ನಷ್ಟವಾಗಿದೆ. ಇದು ನಿಷೇಧ ಅಭಿಯಾನದ ಇನ್ನೊಂದು ಮುಖ ಎಂದೂ ಹೇಳಬಹುದಾಗಿದೆ.

ಇನ್ನೂ ನಿಷೇಧ ಅಭಿಯಾನ ಆರಂಭದಲ್ಲಿ ಯುವಕರಿಗೂ ಒಂದು ಮನರಂಜನೆ ಎಂಬಂತಾಗಿತ್ತು. ಆದರೆ, ದಿನಕಳೆದಂತೆ ಎಲ್ಲದಕ್ಕೂ ನಿಷೇಧ ಎಂಬ ಅಭಿಯಾನ ತಂದಿಟ್ಟಿದ್ದರಿಂದ ಯುವಕರು ಕೂಡ ರೋಸಿ ಹೋದರು. ಹಲವು ವಿವಾದಗಳನ್ನು ತಲೆ ಮೇಲೆ ಹೊತ್ತುಕೊಂಡಿದ್ದ ರಿಷಿ ಕುಮಾರಸ್ವಾಮೀಜಿ ಈ ವಿವಾದಗಳನ್ನು ತನ್ನ ವೈಯಕ್ತಿಕ ಪ್ರಚಾರಕ್ಕೆ ಬಹಳ ಚೆನ್ನಾಗಿ ಬಳಸಿಕೊಂಡರು. ಆದರೆ, ಇಂತಹದಕ್ಕೆಲ್ಲ ಹೆಚ್ಚು ದಿನ ಬಾಳಿಕೆ ಇಲ್ಲ ಎನ್ನುವುದು ಅಷ್ಟೇ ಸತ್ಯ.

ಆತಂಕದಲ್ಲಿರುವ ಹಿಂದೂ ವ್ಯಾಪಾರಿಗಳು:

ರಾಜ್ಯದಲ್ಲಿ ಮುಸ್ಲಿಮರ ರಂಜಾನ್ ತಿಂಗಳು ಆರಂಭವಾಗಿದೆ. ಸಾಕಷ್ಟು ಸಂಖ್ಯೆಯ ಮುಸಲ್ಮಾನರು ಈ ತಿಂಗಳುಗಳಲ್ಲಿ ತಮ್ಮ ಅಂಗಡಿಗಳನ್ನು ಮುಚ್ಚಿರುತ್ತಾರೆ.  ರಂಜಾನ್ ಉಪವಾಸ ಮುಕ್ತಾಯದ ಬಳಿಕ ಹಬ್ಬ ಬರಲಿದ್ದು, ಈ ಬಗ್ಗೆಕ್ಕೆ ಮುಸ್ಲಿಮರು ಭರ್ಜರಿ, ಖರೀದಿಯಲ್ಲಿ ತೊಡಗುತ್ತಾರೆ. ಕಳೆದ ಬಾರಿ ಕೊವಿಡ್ ನೆಪದಲ್ಲಿ ಅಂಗಡಿಗಳನ್ನು ಮುಚ್ಚಿದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದರು. ಈ ಬಾರಿ ಮುಸ್ಲಿಮರಿಗೆ ವ್ಯಾಪಾರಕ್ಕೆ ನಿಷೇಧ ಹೇರಿರುವ ವಿಚಾರ ಸಾಕಷ್ಟು ಸಂಖ್ಯೆಯ ಮುಸಲ್ಮಾನರ ಮನಸ್ಸಿಗೆ ನೋವುಂಟು ಮಾಡಿದೆ. ಇಂತಹ ಸಂದರ್ಭದಲ್ಲಿ ಹಿಂದೂಗಳಿಂದ ಮುಸ್ಲಿಮರು ಬಟ್ಟೆಗಳನ್ನು ಖರೀದಿಸುತ್ತಾರಾ? ಎಂದು ಹಿಂದೂ ಬಟ್ಟೆ ಅಂಗಡಿ ಮಾಲಿಕರು ಆತಂಕ್ಕೀಡಾಗಿದ್ದಾರೆ. ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಆಹಾರ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳಿಗಾಗಿ ಹಿಂದೂ ದಿನಸಿ ಅಂಗಡಿಗಳನ್ನು ಆಶ್ರಯಿಸುತ್ತಾರೆ. ಆದರೆ, ಈ ಬಾರಿ ಮುಸ್ಲಿಮರು ಖರೀದಿಸಲು ಬರುತ್ತಾರೆಯೇ ಎನ್ನುವ ಆತಂಕದಲ್ಲಿ ಹಿಂದೂ ಅಂಗಡಿ ಮಾಲಿಕರಿದ್ದಾರೆ. ನಿಷೇಧ ಅಭಿಯಾನ ಆರಂಭಿಸಿದ ಕೆಲವೇ ಮಂದಿ ತಮ್ಮ ವೈಯಕ್ತಿಕ ಪ್ರಚಾರಕ್ಕೆ ಇದನ್ನು ಬಳಸಿಕೊಂಡರು. ಆದರೆ ಇದರಿಂದ ರಾಜ್ಯದಲ್ಲಿ ಹಿಂದೂಗಳೇ ತೊಂದರಕ್ಕೀಡಾಗುತ್ತಿದ್ದಾರೆ ಎನ್ನುವುದು ವಾಸ್ತವ ಅಂಶವಾಗಿದೆ.

ಇನ್ನೂ ನಿಷೇಧ ಅಭಿಯಾನಕ್ಕೆ ಸಂಬಂಧಿಸಿದಂತೆ ಯಾವುದೇ ಮುಸ್ಲಿಮರು ರಿಯಾಕ್ಟ್ ಮಾಡಬಾರದು, ಹಿಂದೂಗಳ ಅಂಗಡಿಗಳಲ್ಲಿ ಕೂಡ ಖರೀದಿಸಿ, ಹಿಂದೂ ವ್ಯಾಪಾರಿಗಳಿಂದ ಖರೀದಿಸಿ ಎಂದು ಮುಸ್ಲಿಮ್ ಧಾರ್ಮಿಕ ಮುಖಂಡರು ಕರೆ ನೀಡಿದ್ದಾರೆ.

ಮಹತ್ವ ಕಳೆದುಕೊಂಡ ಅಭಿಯಾನ:

ಕೆಲವೇ ಕೆಲವು ಮಂದಿಯ ವೈಯಕ್ತಿ ಪ್ರಚಾರಕ್ಕೆ ಆರಂಭವಾದ ನಿಷೇಧ ಅಭಿಯಾನಗಳು ರಾಜಕೀಯ ಸ್ವರೂಪ ಪಡೆದುಕೊಂಡವು. ಬಿಜೆಪಿ ನಾಯಕರು ಇದರಿಂದ ರಾಜಕೀಯ ಲಾಭವಿದೆ ಎಂದು ತಪ್ಪಾಗಿ ಭಾವಿಸಿದರು. ಆದರೆ, ಇದೀಗ ಈ ಹೋರಾಟಗಳು ಮಹತ್ವ ಕಳೆದುಕೊಂಡಿದೆ. ನಿರೀಕ್ಷಿತ ಪ್ರಮಾಣದಲ್ಲಿ ಅಭಿಯಾನಕ್ಕೆ ಯಾವುದೇ ಬೆಂಬಲಗಳು ವ್ಯಕ್ತವಾಗುತ್ತಿಲ್ಲ. ಜಟ್ಕಾ ಕಟ್ ಎನ್ನುವ ವಿವಾದ ಹಿಂದವಿ ಮೀಟ್ ಮಾರ್ಟ್ ಗೆ ಪ್ರಚಾರ ಕೊಡುವ ಹಿನ್ನೆಲೆ ಹೊಂದಿತ್ತು ಎನ್ನುವ ವಿಚಾರ ಬಹಿರಂಗಗೊಳ್ಳುತ್ತಲೇ ಜನರು ಆಸಕ್ತಿ ಕಳೆದುಕೊಂಡಿದ್ದರು. ಇದೀಗ ಕೆಲವೊಂದು ನಾಯಕರ ವೈಯಕ್ತಿಕ ವಿಚಾರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೀಡಾಗುತ್ತಿದ್ದು, ಹಿಂದೂ ಹೆಸರಿನಲ್ಲಿ ಇವರೇನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗಳಿಗೆ ಈ ಚರ್ಚೆಗಳು ಕಾರಣವಾಗಿದೆ.  ಇದು ಸರ್ಕಾರಕ್ಕೆ ತಿರುಗು ಬಾಣವಾಗುತ್ತಿದ್ದು, ಒಳಗಿಂದೊಳಗೆ ಬಿಜೆಪಿಗೆ ಮುಜುಗರಕ್ಕೆ ಕಾರಣವಾಗಿದೆ. ಇನ್ನೊಂದೆಡೆ ನಿಷೇಧ ಅಭಿಯಾನ ಸರ್ಕಾರಕ್ಕೆ ತಿರುಗುಬಾಣವಾಗ್ತಿದೆ ಅನ್ನೋದು ತಿಳಿಯುತ್ತಿದ್ದಂತೆಯೇ ಸರ್ಕಾರ ಕಠಿಣ ಕ್ರಮ, ಸೂಕ್ತ ಕ್ರಮ ಎಂಬೆಲ್ಲ ಹೇಳಿಕೆಗಳನ್ನು ನೀಡುತ್ತಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಕ್ರಮ ತೈಲ ಸಂಸ್ಕರಣಾಗಾರ  ಸ್ಫೋಟ: 100ಕ್ಕೂ ಅಧಿಕ ಮಂದಿ ಸಾವು

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಬಿಎಸ್ ವೈ ಹೇಳಿದ್ದೇನು?

ಶ್ರೀರಾಮಸೇನೆ, ಭಜರಂಗದಳ, ಆರೆಸ್ಸೆಸ್ ,  ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡೆಯಬೇಕು: ಸಿದ್ದರಾಮಯ್ಯ ಕಿಡಿ

ಮನೆಯೊಳಗೆ ಸ್ಫೋಟಗೊಂಡ ಎಲೆಕ್ಟ್ರಿಕ್ ಬೈ ಕ್‌ ನ ಬ್ಯಾಟರಿ: ಓರ್ವ ಸಾವು, ಮಹಿಳೆಯ ಸ್ಥಿತಿ ಗಂಭೀರ

ಒಂದೇ ಮನೆಯ ಐವರನ್ನು ಹತ್ಯೆ ಮಾಡಿ ಮನೆಗೆ ಬೆಂಕಿ ಇಟ್ಟ ಪಾಪಿಗಳು!

 

ಇತ್ತೀಚಿನ ಸುದ್ದಿ