ಮಹಿಳಾ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಿಜೆಪಿ ಮುಖಂಡ!
ಮಂಗಳೂರು: ಮಹಿಳಾ ಅಧಿಕಾರಿಯೊಬ್ಬರನ್ನು ಬಿಜೆಪಿ ಮುಖಂಡರೋರ್ವರು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದ್ದು, ಘಟನೆ ಸಂಬಂಧ ಮಹಿಳಾ ಅಧಿಕಾರಿ ಬಿಜೆಪಿ ಮುಖಂಡನ ವಿರುದ್ಧ ದೂರು ನೀಡಿದ್ದಾರೆ.
ಮಂಗಳೂರು ನಗರದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಸ್ಥಳೀಯ ಬಿಜೆಪಿ ಮುಖಂಡ, ನ್ಯಾಯವಾದಿ ಅಸ್ಗರ್ ಮುಡಿಪು, ಕರ್ನಾಟಕ ಜಲಮಂಡಳಿ ಇಂಜಿನಿಯರ್ ಶೋಭಾ ಲಕ್ಷ್ಮಿ ಎಂಬವರನ್ನು ಅವಾಚ್ಯವಾಗಿ ನಿಂದಿಸಿದ್ದು, ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ.
ಮಂಗಳೂರು ಶಾಸಕ ಯು.ಟಿ ಖಾದರ್ ಅನುದಾನದ ಕಾಮಗಾರಿ ಇದಾಗಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ತಡೆದು ಅಧಿಕಾರಿಗೆ ನಿಂದನೆ ಮಾಡಿದ್ದಾನೆ. ಕಾಮಗಾರಿ ನಡೆಯಬೇಕಾದರೆ ಆರ್ಡರ್ ಕಾಪಿ ಕೊಟ್ಟು ಕೆಲಸ ಮಾಡಬೇಕು ಅಂತ ಅವಾಚ್ಯವಾಗಿ ಬೈದಿದ್ದಲ್ಲದೆ, ನೀವು ಕಾಂಗ್ರೆಸ್‌ನ ನಾಯಿ, ಎಂಜಲು ತಿಂದು ಸರ್ಕಾರಕ್ಕೆ ಕಪ್ಪುಚುಕ್ಕೆ ತಂದವರು, ಕಾಂಗ್ರೆಸ್‌ನ ಒಬ್ಬ ನಾಯಿ ಇಲ್ಲಿ ಗುಂಡಿ ತೆಗೆದು ವಂಚನೆ ಮಾಡಿದ್ದಾನ, ನಾನು ಕೋರ್ಟ್ ಗೆ ಹೋಗುತ್ತೇನೆ, ನೀವು ಕೇಸ್ ಕೊಡಿ ಏನಾದರೂ ಮಾಡಿ ಎಂದು ಅಸ್ಗರ್ ಕೂಗಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪುಕ್ಕಟೆ ಪ್ರಚಾರ ಪಡೆಯುವ ಉದ್ದೇಶದಿಂದ ಅಸ್ಗರ್ ಈ ರೀತಿಯ ವರ್ತನೆ ತೋರಿದ್ದಾರೆ ಎಂದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಈ ಸಂಬಂಧ ನೊಂದ ಅಧಿಕಾರಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.