ಮಹಿಳೆಯರ ಹಕ್ಕುಗಳ ರಕ್ಷಕ: ಬಾಬಾಸಾಹೇಬ್ ಡಾ.ಅಂಬೇಡ್ಕರ್
- ರಘೋತ್ತಮ ಹೊ.ಬ
ಮಹಿಳೆಯರಿಗೆ ಇಂದು ಭರಪೂರ ಹಕ್ಕುಗಳಿವೆ. ಆಯೋಗವಿದೆ, ದೌರ್ಜನ್ಯಕ್ಕೆ ರಕ್ಷಣೆ ಇದೆ, ಆಸ್ತಿಯಲ್ಲಿ ಪಾಲೂ ಇದೆ. ಆಶ್ಚರ್ಯವೆಂದರೆ ಇದನ್ನೆಲ್ಲ ಭಾರತೀಯ ಮಹಿಳೆಯರಿಗೆ ನೀಡಿದ್ದು? ಅದು ಬಾಬಾಸಾಹೇಬ್ ಅಂಬೇಡ್ಕರರಲ್ಲದೆ ಬೇರಾರು ಅಲ್ಲ. ಹಾಗಿದ್ದರೆ ಅಂಬೇಡ್ಕರರು ಯಾಕೆ ಮಹಿಳೆಯರಿಗೆ ಹಾಗೆ ಹಕ್ಕುಗಳನ್ನು ನೀಡಿದರು ಎಂಬ ಪ್ರಶ್ನೆ ಬರುತ್ತದೆ. ಈ ನಿಟ್ಟಿನಲ್ಲಿ ಅವರದೆ ಸ್ಪಷ್ಟನೆಯನ್ನು ಇಲ್ಲಿ ದಾಖಲಿಸುವುದಾದರೆ,
“ಹಿಂದೂ ಸಮಾಜದ ಆತ್ಮವಾಗಿರುವ ಲಿಂಗ ಅಸಮಾಾನತೆ, ವರ್ಗ ವರ್ಗಗಳ ನಡುವಿನ ಅಸಮಾನತೆ, ಇವುಗಳನ್ನು ಮುಟ್ಟದೆ ಹಾಗೆ ಬಿಟ್ಟು ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾನೂನು ರೂಪಿಸುವುದೆಂದರೆ ಸೆಗಣಿಯ ಗುಡ್ಡೆಯ ಮೇಲೆ ಅರಮನೆ ಕಟ್ಟಿದಂತೆ, ನಮ್ಮ ಸಂವಿಧಾನವನ್ನು ನಗೆಪಾಟಲಿಗೀಡುಮಾಡಿದಂತೆ.”
ಈ ದಿಸೆಯಲ್ಲಿ ಈ ದೇಶದ ಪ್ರಥಮ ಕಾನೂನು ಸಚಿವರಾಗಿ ಮಹಿಳೆಯರ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಅಂಬೇಡ್ಕರ್ ಅಂದು ರೂಪಿಸಿದ ಮಸೂದೆ ಬಗ್ಗೆ ತಿಳಿಯುವುದು ಅತ್ಯಗತ್ಯ. ಅಂಬೇಡ್ಕರ್ ರವರು ರಚಿಸಿದ ‘ಹಿಂದೂ ಕೋಡ್ ಬಿಲ್” ಮುಖ್ಯವಾಗಿ 7 ಅಂಶಗಳನ್ನು ಒಳಗೊಂಡಿತ್ತು. ಅವುಗಳೆಂದರೆ
1.ಆಸ್ತಿಯ ಹಂಚಿಕೆ.
2.ಆಸ್ತಿಗೆ ವಾರಸುದಾರರನ್ನು ಪಟ್ಟಿಮಾಡುವುದು.
3.ಜೀವನಾಂಶ.
4.ಮದುವೆ.
5.ವಿಚ್ಛೇಧನ.
6.ದತ್ತು ಸ್ವೀಕಾರ.
7.ಅಪ್ರಾಪ್ತ ವಯಸ್ಕರ ಮದುವೆ.
(ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.14, ಭಾಗ.1, ಪು.41). ಖಂಡಿತ, ಈ ಏಳು ಅಂಶಗಳ ಅಂಬೇಡ್ಕರರ ಅಂತಹದ್ದೊಂದು ಪ್ರಯತ್ನಕ್ಕೆ ಪ್ರಮುಖ ಕಾರಣ ಈ ದೇಶದ ಮಹಿಳೆಯರು ಮತ್ತು ಮಕ್ಕಳ ಹಿತಚಿಂತನೆ ಎಂಬುದು ಮತ್ತೆ ಮತ್ತೆ ಇಲ್ಲಿ ಒತ್ತಿಹೇಳಬೇಕಾದ ಅಂಶ.
ಆಸ್ತಿಯಲ್ಲಿ ಮಹಿಳೆಯರಿಗೆ ಪಾಲು: ಮೊದಲಿಗೆ ಅಂಬೇಡ್ಕರರು ಹೇಳುವುದು ಆಸ್ತಿಯ ಹಂಚಿಕೆಯ ಬಗ್ಗೆ. ಆ ಕಾಲದಲ್ಲಿ ಹಿಂದೂಗಳಲ್ಲಿ ಆಸ್ತಿಯ ಹಂಚಿಕೆ ಬಗ್ಗೆ ಎರಡು ವಿಧಾನಗಳಿತ್ತು. ಒಂದನೆಯದು ಮಿತಾಕ್ಷರ, ಎರಡನೆಯದು ದಯಾಭಾಗ. ಇದರಲ್ಲಿ ಹಿಂದೂಗಳು ಪ್ರಮುಖವಾಗಿ ಮಿತಾಕ್ಷರ ಪದ್ಧತಿಯನ್ನು ಅನುಸರಿಸುತ್ತಿದ್ದರು. ಮಿತಾಕ್ಷರದ ಈ ಪದ್ಧತಿಯಲ್ಲಿ ಆಸ್ತಿಯು ವ್ಯಕ್ತಿಯು ಬದುಕಿದ್ದಾಗ ಅದು ಆತನ ಸ್ವಂತ ಆಸ್ತಿಯಾಗಿರುತ್ತಿರಲಿಲ್ಲ. ಬದಲಿಗೆ ಅದು ತಂದೆ, ಮಗ, ಮೊಮ್ಮಗ ಮತ್ತು ಮರಿಮೊಮ್ಮಗ ಹೀಗೆ ನಾಲ್ವರು ಸಮಾನ ಪಾಲುದಾರರಿಗೆ ಸೇರಿರುತ್ತಿತ್ತು. ತಂದೆ, ಮಗ, ಮೊಮ್ಮಗ, ಮರಿಮೊಮ್ಮಗ ಈ ಸರಣಿಯಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶವೇ ಇಲ್ಲ ಎಂಬುದನ್ನು ಓದುಗರು ಗಮನಿಸಬೇಕು!. ಆದರೆ ಅಂಬೇಡ್ಕರರು ಮಿತಾಕ್ಷರದ ಈ ಪದ್ಧತಿಯ ಬದಲಿಗೆ ದಯಾಭಾಗ ಪದ್ಧತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದರು. ದಯಾಭಾಗ ಈ ಪದ್ಧತಿಯ ಪ್ರಕಾರ ವ್ಯಕ್ತಿಯು ಬದುಕಿದ್ದಾಗ ಆಸ್ತಿಯು ಆತನ ಸ್ವಂತದ್ದಾಗಿದ್ದು ಸತ್ತ ನಂತರ ಅದು ಆತನ ಉತ್ತರಾಧಿಕಾರಿಗೆ ಸೇರುತ್ತಿತ್ತು. ಆ ಉತ್ತರಾಧಿಕಾರಿ ಅದನ್ನು ಮಾರಬಹುದಿತ್ತು, ಕೊಡುಗೆ ಅಥವ ವಿಲ್ ಮೂಲಕ ತನಗೆ ಬೇಕಾದವರಿಗೆ ಕೊಡಬಹುದಿತ್ತು. ಮುಂದುವರಿದು ಅಂಬೇಡ್ಕರರು ಹೇಳಿದ್ದು ಆಸ್ತಿಯ ವಾರಸುದಾರಿಕೆ ಅಥವ ವ್ಯಕ್ತಿ ಸತ್ತ ನಂತರ ಆಸ್ತಿ ಯಾರಿಗೆ ಸೇರುತ್ತದೆ ಎಂಬುದನ್ನು. ಅಂದು ಜಾರಿಯಲ್ಲಿದ್ದ ಮಿತಾಕ್ಷರ ಪದ್ಧತಿ ಪ್ರಕಾರ ವ್ಯಕ್ತಿ ಸತ್ತ ನಂತರ ಆತನ ಆಸ್ತಿ ಆತನ ಸಹಜಾತರು ಅಂದರೆ ಅಣ್ಣತಮ್ಮಂದರಿಗಿಂತ ಆತನ ಪಿತೃ ಸಂಬಂಧಿಗಳಿಗೆ ಹೋಗುತ್ತಿತ್ತು. ಅಂದರೆ ತಂದೆಯ ಸಂಬಂಧಿಗಳಿಗೆ ಹೋಗುತ್ತಿತ್ತು. ಆದರೆ ಅಂಬೇಡ್ಕರರು ದಯಾಭಾಗ ಪದ್ಧತಿ ಶಿಫಾರಸು ಮಾಡಲಾಗಿ ಆಸ್ತಿ ಆತನ ರಕ್ತ ಸಂಬಂಧಿಗಳಿಗೇ ಹೋಗುವಂತಾಯಿತು. ಈ ಸಂದರ್ಭದಲ್ಲಿ ಅಂಬೇಡ್ಕರರು ಆಸ್ತಿಯ ವಾರಸುದಾರಿಕೆಗೆ ಸಂಬಂಧಿಸಿದಂತೆ ಮಹಿಳೆಯರ ಪರವಾಗಿ ಒಂದು ಬದಲಾವಣೆ ತಂದರು. ಅದೆಂದರೆ ಅದುವರೆಗಿನ ನಿಯಮದಲ್ಲಿ ಕೇವಲ ಮಗನಷ್ಟೆ ವಾರಸುದಾರನಾಗಿರುತ್ತಿದ್ದ. ಆದರೆ ಅಂಬೇಡ್ಕರರು ಅಂತಹ ವಾರಸುದಾರಿಕೆಗೆ ಮಗಳು, ವಿಧವೆ, ಈಗಾಗಲೇ ಮರಣ ಹೊಂದಿರುವಂತಹ ಮಗನ ವಿಧವಾ ಪತ್ನಿ ಇವರೆಲ್ಲರನ್ನು ಮಗನಷ್ಟೆ ಸಮಾನ ವಾರಸುದಾರಿಕೆಗೆ ತಂದರು. ಆ ಮೂಲಕ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಪಾಲು ನೀಡಿದರು.
ಅದು ಅದೆಷ್ಟು ಪಾಲು? ಅಂದರೆ ತಂದೆಯ ಆಸ್ತಿಯಲ್ಲಿ ಮಗನಿಗೆ ಎಷ್ಟು ಸಿಗುತ್ತದೆಯೋ ಅದರ ಅರ್ಧದಷ್ಟು ಮಗಳಿಗೆ. ಈ ಸಂದರ್ಭದಲ್ಲಿ ಆ ಹೆಣ್ಣು ಮಗಳು ಮದುವೆಯಾಗಿದ್ದರೆ ಅಥವ ಮದುವೆಯಾಗದಿದ್ದರೆ? ಖಂಡಿತ, ಅದ್ಯಾವುದೂ ಅಡ್ಡಿ ಬರದಂತೆ ಮಗನ ಅರ್ಧದಷ್ಟು ಆಕೆ ಪಡೆಯುವಂತಾಯಿತು.
ಆಸ್ತಿಯ ವಾರಸುದಾರಿಕೆ:
ಇನ್ನು ಈ ವಾರಸುದಾರಿಕೆಯಲ್ಲಿ, ಮೊದಲು ತಂದೆ ನಂತರ ತಾಯಿ ಎಂದಿತ್ತು. ಆದರೆ ಅಂಬೇಡ್ಕರರು ಮೊದಲು ತಾಯಿ ನಂತರ ತಂದೆ ಎಂದು ಬದಲಿಸಿದರು. ಈ ಸಂದರ್ಭದಲ್ಲಿ ಮಹಿಳೆಯರದೇ ಹೆಸರಿನಲ್ಲಿರುವ ಆಸ್ತಿ ಅಥವ ಸ್ತ್ರೀಧನಕ್ಕೆ ಸಂಬಂಧಿಸಿ ಅನೇಕ ವಾರಸುದಾರಿಕೆಯ ನಿಯಮಗಳಿದ್ದವು. ಅಂಬೇಡ್ಕರರು ಅವೆಲ್ಲವನ್ನು ಒಂದೇ ನಿಯಮದಡಿ ತಂದರು. ಹಾಗೆಯೇ ಹೇಗೆ ತಂದೆಯ ಆಸ್ತಿಯಲ್ಲಿ ಮಗಳಿಗೆ ಅರ್ಧದಷ್ಟು ಎಂದರೋ ಹಾಗೆಯೇ ಸ್ತ್ರೀಧನದಲ್ಲಿ ಮಗನಿಗೂ ಮಗಳ ಅರ್ಧದಷ್ಟು ಎಂದು ಬದಲಾವಣೆ ತಂದರು. ಅದುವರೆವಿಗೆ ಇದ್ದ ನಿಯಮವೆಂದರೆ ಗಂಡ ತೀರಿಹೋದರೆ ಆಸ್ತಿ ಆಕೆಯ ಗಂಡನ ಸಂಬಂಧಿಕರಿಗೆ ಹೋಗುತ್ತಿತ್ತು.
ಆದರೆ ಅಂಬೇಡ್ಕರರು ಅದನ್ನು ಆತನ ವಿಧವಾ ಪತ್ನಿಗಷ್ಟೆ ಎಂಬಂತೆ ಬದಲಾವಣೆ ತಂದರು. ಪತಿಯ ಸಂಬಂಧಿಕರಿಗೆ ಅದರಲ್ಲಿ ಯಾವುದೇ ಪಾಲೂ ಇಲ್ಲವೆಂಬ ನಿಯಮ ರೂಪಿಸಿದರು. ಈ ಸಮಯದಲ್ಲಿ ವರದಕ್ಷಿಣೆ ಬಗ್ಗೆಯೂ ಅಂಬೇಡ್ಕರರು ಒಂದು ನಿಯಮ ತಂದರು. ಅಂದರೆ ಅದನ್ನು ನಿಷೇಧಿಸಿದರು. ಆದರೂ ವರದಕ್ಷಿಣೆ, ಅದು ವಧುವಿನ ಆಸ್ತಿ. ಅದನ್ನು ಆಕೆಯ ಗಂಡನಾಗಲೀ ಆತನ ಸಂಬಂಧಿಕರಾಗಲೀ ಬಳಸುವಂತಿಲ್ಲ. ಬದಲಿಗೆ ಆಕೆಗೆ 18 ವರ್ಷ ತುಂಬಿದ ನಂತರ ಅದು ಆಕೆಯ ವಯಕ್ತಿಕ ಆಸ್ತಿಯಾಗುತ್ತದೆ ಎಂದರು.
ಮಹಿಳೆಯರಿಗೆ ಜೀವನಾಂಶ:
ಇನ್ನು ಜೀವನಾಂಶ; ಅದುವರೆಗೆ ಅಕಸ್ಮಾತ್ ಹೆಂಡತಿ ಗಂಡನಿಂದ ದೂರವಾಗಿ ಬದುಕುವಂತಾದರೆ ಆಕೆಗೆ ಜೀವನಾಂಶ ಸಿಗುತ್ತಿರಲಿಲ್ಲ. ಆದರೆ ಅಂಬೇಡ್ಕರರು ಜೀವನಾಂಶ ಸಿಗುವಂತೆ ಮಾಡಿದರು. ಅಲ್ಲದೆ ಅಂತಹ ಜೀವನಾಂಶದ ಸಂದರ್ಭವನ್ನು ಕೂಡ ಅವರು ಮಹಿಳೆಯ ಹಿತದೃಷ್ಟಿಯಿಂದ ಪಟ್ಟಿಮಾಡಿದರು. ಅವುಗಳೆಂದರೆ
1.ಆತ ಅಸಹನೀಯ ರೋಗದಿಂದ ನರಳುತ್ತಿದ್ದರೆ.
2.ಆತ ಇನ್ನೊಬ್ಬಳನ್ನು ಇಟ್ಟುಕೊಂಡಿದ್ದರೆ.
3.ಆತ ಅತಿ ಕ್ರೂರನಾಗಿದ್ದರೆ.
4.ಆತ ಅವಳನ್ನು ಬಿಟ್ಟು ಎರಡು ವರ್ಷಗಳು ಮೀರಿ ದೂರ ಇದ್ದರೆ.
5.ಆತ ಬೇರೆ ಯಾವುದಾದರೂ ಧರ್ಮಕ್ಕೆ ಮತಾಂತರ ಹೊಂದಿದ್ದರೆ.
ಅಥವಾ ಇನ್ನಾವುದಾದರೂ ನ್ಯಾಯಬದ್ಧ ಕಾರಣಗಳು.
ಹೀಗೆ ಅಂಬೇಡ್ಕರರು ಮಹಿಳೆಗೆ ಕಾನೂನಾತ್ಮಕವಾಗಿ ಸ್ವಾತಂತ್ರ್ಯ ನೀಡಿದ್ದರು.
ಮದುವೆ ಮತ್ತು ವಿಚ್ಛೇದನದ ಹಕ್ಕು:
ಮುಂದುವರೆದು ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅದುವರೆವಿಗೂ ಹಿಂದೂ ಕಾನೂನಿನಲ್ಲಿ ಸಾಕ್ರಮೆಂಟ್ ಅಥವ ಧಾರ್ಮಿಕ ಮದುವೆಗಷ್ಟೆ ಮಾನ್ಯತೆ ಇತ್ತು. ಸಿವಿಲ್ ಮ್ಯಾರೇಜ್ ಅಥವ ನಾಗರಿಕ ಮದುವೆಗೆ ಯಾವುದೇ ಮಾನ್ಯತೆ ಇರಲಿಲ್ಲ. ಹಾಗೆಯೇ ಧಾರ್ಮಿಕ ಮದುವೆಯಲ್ಲಿ ಜಾತಿ, ಉಪಜಾತಿ ನಮೂದಿಸುವುದು ಕಡ್ಡಾಯವಾಗಿತ್ತು. ಆದರೆ ಅಂಬೇಡ್ಕರರು ರೂಪಿಸಿದ ಮದುವೆಯ ಆ ನಿಯಮದಲ್ಲಿ ಜಾತಿ ಮತ್ತು ಉಪಜಾತಿ ಕಡ್ಡಾಯ ನಮೂದಿಸುವುದನ್ನು ಕೈಬಿಟ್ಟರು. ಪ್ರಾಪ್ತ ವಯಸ್ಕರಿದ್ದರೆ ಸಾಕು ಅವರು ಯಾವುದೇ ಜಾತಿ ಉಪಜಾತಿ ಇರಲಿ ಮದುವೆ ಸಿಂಧು ಎಂಬ ನಿಯಮ ರೂಪಿಸಿದರು.
ಅದುವರೆವಿಗೂ ಇದ್ದ ಧಾರ್ಮಿಕ ಮದುವೆ ಪದ್ಧತಿಯಲ್ಲಿ ವಿಚ್ಛೇದನಕ್ಕೆ ಅವಕಾಶ ಇರಲಿಲ್ಲ. ಆದರೆ ಅಂಬೇಡ್ಕರರು ವಿಚ್ಛೇದನಕ್ಕೆ ಅವಕಾಶ ನೀಡಿದರು. ಅದಕ್ಕೆ ಅವರು ಏಳು ಕಾರಣಗಳನ್ನು ನೀಡಿದರು. ಅವುಗಳೆಂದರೆ
1.ಪತ್ನಿಯನ್ನು ಪರಿತ್ಯಜಿಸಿ ದೂರ ಇರುವುದು.
2.ಬೇರೆ ಧರ್ಮಕ್ಕೆ ಮತಾಂತರ ಹೊಂದಿರುವುದು.
3.ಬೇರೊಬ್ಬರನ್ನು ಇಟ್ಟುಕೊಂಡಿರುವುದು.
4.ಗುಣಪಡಿಸಲಾಗದ ರೋಗದಿಂದ ನರಳುತ್ತಿರುವುದು.
5.ಕುಷ್ಟರೋಗದಿಂದ ನರಳುತ್ತಿರುವುದು.
6.ಅಂಟುರೋಗದಿಂದ ನರಳುತ್ತಿರುವುದು.
7.ಕ್ರೂರತೆ.
ಅಂದಹಾಗೆ ಮಹಿಳೆಯರಿಗೆ ಮದುವೆಯನ್ನೇ ರದ್ದುಗೊಳಿಸಿಕೊಳ್ಳುವ ನಿಯಮ ಕೂಡ ಅಂಬೇಡ್ಕರರು ಸೇರಿಸಿದರು. ಆ ಸಂದರ್ಭಗಳೆಂದರೆ,
1.ನಪುಂಸಕತ್ವ
2.ಸಪಿಂಡ
3.ಮಾನಸಿಕ ಅಸ್ವಸ್ಥತೆ
4.ಪೋಷಕರ ಬಲವಂತ.
ಹಾಗೆಯೇ ಅದುವರೆಗೆ ಬಹುಪತ್ನಿತ್ವ ಜಾರಿಯಲ್ಲಿತ್ತು. ಆದರೆ ಅಂಬೇಡ್ಕರರು ಏಕಪತ್ನಿತ್ವ ನಿಯಮವನ್ನು ವಿವಾಹ ಕಾನೂನಿಗೆ ಸೇರಿಸಿದರು.
ಹೀಗೆ ಮಹಿಳೆಯರ ರಕ್ಷಣೆಯ ನಿಟ್ಟಿನಲ್ಲಿ ಅಮೂಲಾಗ್ರ ಬದಲಾವಣೆಗಳನ್ನೊಳಗೊಂಡ ಮಸೂದೆಯನ್ನು ಅಂಬೇಡ್ಕರರು ರೂಪಿಸಿ ಸಂಸತ್ತಿನಲ್ಲಿ ಮಂಡಿಸಿದರು.
ಪ್ರಶ್ನೆಯೇನೆಂದರೆ ಅದು ಅಂಗೀಕಾರಗೊಂಡಿತೇ? ಖಂಡಿತ, ಆ ಕಥೆ ಹೇಳಿದರೆ ಅದೇ ಒಂದು ಮಹಾಕಾವ್ಯವಾಗುತ್ತದೆ. ಯಾಕೆಂದರೆ ಕರ್ಮಠ ಹಿಂದೂಗಳು ಮಹಿಳೆಯರಿಗೆ ಹಕ್ಕುಗಳನ್ನು ಕೊಡುವ ದಿಸೆಯಲ್ಲಿ ತಮ್ಮ ಧರ್ಮಕ್ಕೆ ಈ ಪರಿಯ ತಿದ್ದುಪಡಿಯನ್ನು ತರುವುದನ್ನು ಅದರಲ್ಲೂ ಅಸ್ಪøಶ್ಯನೊಬ್ಬ ತರುವುದನ್ನು ಸಹಿಸಿಕೊಳ್ಳುತ್ತಾರೆಯೇ? ಖಂಡಿತ ಇಲ್ಲ. ಅಂಬೇಡ್ಕರರ ಈ ಮಸೂದೆಗೆ ಎದುರಾಗಿ ಅವರು ಸ್ಮೃತಿ, ಶೃತಿ ಧರ್ಮಗಳ ಉಲ್ಲೇಖ ಮುಂದಿಡುತ್ತಾರೆ.
ಉದಾಹರಣೆಗೆ ಶ್ರೀ ಸರ್ವತೆ ಎಂಬುವವರೊಬ್ಬರು ಹೇಳುತ್ತಾರೆ “ಹಿಂದೂ ಧರ್ಮ ಜಾತಿ ಆಧಾರದ ಮೇಲೆ ನಿಂತಿದೆ. ಒಂದು ವೇಳೆ ಮದುವೆಯೊಂದು ನಡೆಯಿತೆಂದರೆ ಅದು ಪವಿತ್ರ ಎಂದರ್ಥ ಅದನ್ನು ರದ್ದುಗೊಳಿಸಲು ಸಾಧ್ಯವೇ ಇಲ್ಲ. ಇನ್ನು ಸನಾತನ ವೈದಿಕ ಧರ್ಮದ ಪ್ರಕಾರ ವಿಚ್ಛೇದನವಂತು ಸಾಧ್ಯವೇ ಇಲ್ಲ!”. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.14, ಭಾಗ.2, ಪು.807). ಇನ್ನು ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನೀಡಿರುವುದರ ಬಗ್ಗೆ ಶ್ರೀ.ಎಂ.ಎ.ಅಯ್ಯಂಗಾರ್‍ರವರು ಹೇಳುವುದು “ಹಿಂದೂ ವಿವಾಹ ಪದ್ಧತಿ, ವಿಚ್ಛೇಧನ ನೀಡದಿರುವುದು, ಹಾಗೆಯೇ ಕುಟುಂಬಕ್ಕೆ ಬಾಧ್ಯಸ್ಥರಲ್ಲದ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡದಿರುವುದು, ಇತ್ಯಾದಿ… ಇವೆಲ್ಲ ಈ ದೇಶದ ಜನತೆಯ ನೈತಿಕ ಶಕ್ತಿಯ ಮೂಲಗಳಾಗಿವೆ! ನಾನೊಂದು ಸರಳ ಪ್ರಶ್ನೆ ಕೇಳುತ್ತೇನೆ. ನನ್ನ ಮಗಳು ಮದುವೆಯಾಗುತ್ತಾಳೆ ಎಂದಿಟ್ಟುಕೊಳ್ಳಿ. ಆಗ ನಾನು ನನ್ನ ಅಳಿಯನ ಮನೆಯಲ್ಲಿ ಉಳಿದುಕೊಳ್ಳಬೇಕೋ ಅಥವಾ ನನ್ನ ಮಗನ ಮನೆಯಲ್ಲಿ ಉಳಿದುಕೊಳ್ಳಬೇಕೋ? ಹೇಳಿ, ನೀವೇ ಹೇಳಿ” (ಅದೇ ಕೃತಿ. ಪು.939).
ಖಂಡಿತ, ಹೀಗೆ ಸಾಗುವ ಆ ಚರ್ಚೆ ಮಹಿಳೆಯರಿಗೆ ಹಕ್ಕು ಗಳನ್ನು ನೀಡುವ ಅಂಬೇಡ್ಕರರ ಆ ಪ್ರಯತ್ನಕ್ಕೆ ನ್ಯಾಯ ದೊರಕಿಸಿಕೊಟ್ಟಿತೆ? ಖಂಡಿತ ಇಲ್ಲ. ಬದಲಿಗೆ ಅಂಬೇಡ್ಕರರು ತಮ್ಮ ಆ ಕಾನೂನು ಮಂತ್ರಿ ಪದವಿಗೇ ರಾಜೀನಾಮೆ ನೀಡುವಂತಹ ಪರಿಸ್ಥಿತಿ ತಂದೊಡ್ಡಿತು ಮತ್ತು ಅಂಬೇಡ್ಕರರು ರಾಜೀನಾಮೆ ನೀಡಿದರು ಕೂಡ! ಆದರೂ ಈ ನಿಟ್ಟಿನಲ್ಲಿ ಅಂತಿಮವಾಗಿ 1955-56 ಸಮಯದಲ್ಲಿ ಅಂಬೇಡ್ಕರರು ರಾಜೀನಾಮೆ ಕೊಟ್ಟ 4 ವರ್ಷಗಳ ನಂತರ ಮಹಿಳೆಯರ ಹಕ್ಕುಗಳ ರಕ್ಷಣೆಯ ಬಾಬಾಸಾಹೇಬರು ರೂಪಿಸಿದ ಆ ಮಸೂದೆ ಅಂಗೀಕಾರವಾಯಿತು.
ಈ ಸಂದರ್ಭದಲ್ಲಿ 2016ರಲ್ಲಿ ಇಡೀ ದೇಶಕ್ಕೆ ನಂ.1 ಎಂಬ ಖ್ಯಾತಿಯೊಡನೆ ಐಎಎಸ್ ಪರೀಕ್ಷೆ ಪಾಸು ಮಾಡಿದ ಟೀನಾ ಡಾಬಿ ಎಂಬ ಶೋಷಿತ ಸಮುದಾಯದ ಹೆಣ್ಣುಮಗಳ ಹೇಳಿಕೆ ಇಲ್ಲಿ ಉಲ್ಲೇಖಾರ್ಹ. ಟೀನಾ ಡಾಬಿ ಹೇಳುತ್ತಾರೆ “ಬಾಬಾಸಾಹೇಬ್ ಅಂಬೇಡ್ಕರರೇ ನನ್ನ ತಾತ ಮತ್ತು ಅವರೇ ನನಗೆ ಸ್ಫೂರ್ತಿ. ಅವರ ಮೀಸಲಾತಿ ನೀತಿ ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ‘ಹಿಂದೂ ಸಂಹಿತೆ ಮಸೂದೆ’ಯಿಂದಷ್ಟೆ ನಾನು ಐಎಎಸ್ ಪಾಸು ಮಾಡಲು ಸಾಧ್ಯವಾಯಿತು”. ಖಂಡಿತ, ಟೀನಾ ಡಾಬಿಯವರ ಈ ಹೇಳಿಕೆ ಈ ದೇಶದ ಎಲ್ಲ ಮಹಿಳೆಯರ ಹೇಳಿಕೆಯಾಗಬೇಕಿತ್ತು.
ದುರಂತವೆಂದರೆ ಈ ದೇಶದ ಮೇಲ್ವರ್ಗದ ಹೆಣ್ಣುಮಕ್ಕಳಿಗೆ ಅಂಬೇಡ್ಕರ್ ತಮಗೋಸ್ಕರ ಈ ಪರಿ ಹೋರಾಡಿರುವ ಸತ್ಯ ಅರಿವಿಗೆ ಬರುವುದಿಲ್ಲ. ಬದಲಿಗೆ ಯಥಾಪ್ರಕಾರ ಜಾತೀಯತೆಯ ಮನಸ್ಥಿತಿಯಲ್ಲಿ ಅಂಬೇಡ್ಕರರನ್ನು ವಿರೋಧಿಸ ನೋಡುತ್ತಾರೆ! ಈ ನಿಟ್ಟಿನಲ್ಲಿ ಅಂತಹ ಚಾಳಿ ನಿಲ್ಲಲಿ ಈ ದೇಶದ ಪ್ರತಿಯೊಬ್ಬ ಮಹಿಳೆ ಮಹಿಳಾ ದಿನದ ಈ ಶುಭ ದಿನ ಬಾಬಾಸಾಹೇಬ್ ಅಂಬೇಡ್ಕರ್ ರನ್ನು ಗೌರವ ಪೂರ್ವಕವಾಗಿ ಸ್ಮರಿಸಲಿ ಎಂಬುದೇ ಸದ್ಯದ ಕಳಕಳಿ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka