ಸದನದಲ್ಲಿ ಪ್ರತಿಭಟಿಸಿದ ಮಹಿಳಾ ಶಾಸಕಿಯನ್ನು ಎಳೆದು ಹೊರ ಹಾಕಿದ ಭದ್ರತಾ ಸಿಬ್ಬಂದಿ!
ಪಾಟ್ನಾ: ಪೊಲೀಸ್ ಮದೂದೆ ವಿಚಾರದಲ್ಲಿ ಬಿಹಾರ ವಿಧಾನಸಭೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಆರ್ ಜೆಡಿ ಪಕ್ಷ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದೆ. ಈ ಸಂದರ್ಭದಲ್ಲಿ ಆರ್ ಜೆಡಿ ಮಹಿಳಾ ಶಾಸಕಿಯನ್ನು ಭದ್ರತಾ ಸಿಬ್ಬಂದಿ ದರದರನೇ ಎಳೆದುಕೊಂಡು ಹೋಗಿ ಸದನದಿಂದ ಹೊರ ಹಾಕಿದ ಅಮಾನವೀಯ ಘಟನೆ ನಡೆದಿದೆ.
ಸ್ಪೀಕರ್ ವಿಜಯ ಕುಮಾರ್ ಸಿನ್ಹಾ ತಮ್ಮ ಕೊಠಡಿಯಿಂದ ಹೊರ ಹೋಗದಂತೆ ತಡೆದು ಪ್ರತಿಭಟಿಸಿದ ಶಾಸಕಿ, ವಿಧಾನಸಭೆಯ ಬಾಗಿಲಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಶಾಸಕಿಯನ್ನು ವಿಧಾನಸಭೆಯ ಬಾಗಿಲಿಂದ ಎಳೆದು ಹೊರ ಹಾಕಿದೆ.
ಆರ್ ಜೆಡಿ ಶಾಸಕ ತೇಜಸ್ವಿ ಯಾದವ್ ಪೊಲೀಸ್ ಬಿಲ್‌ಗೆ ನಮ್ಮ ವಿರೋಧವಿದೆ, ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಲು ವಿಪಕ್ಷಗಳು ತೀರ್ಮಾನ ತೆಗೆದುಕೊಂಡಿವೆ ಎಂದು ಸದನಕ್ಕೆ ಹೋಗುವುದಕ್ಕೂ ಮೊದಲೇ ಮಾಧ್ಯಮಗಳಿಗೆ ತಿಳಿಸಿದ್ದರು.
ವಿರೋಧ ಪಕ್ಷಗಳು ಬಿಹಾರ್ ಸ್ಪೆಷಲ್ ಆರ್ಮ್ಡ್ ಪೊಲೀಸ್ ಬಿಲ್ 2021 ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದವು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ನಮ್ಮ ಮೇಲೆ ನೂಕಾಟ, ತಳ್ಳಾಟ ಮಾಡಿದ್ದಾರೆ. ಎಸ್ ಪಿ ಅವರು ನನ್ನ ಎದೆಗೆ ಹೊಡೆದಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಶಾಸಕ ಸತ್ಯೇಂದ್ರ ಕುಮಾರ್ ಹೇಳಿದ್ದಾರೆ.