ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆ ಜೊತೆ ಅರವಿಂದ್ ಲಿಂಬಾವಳಿ ದುರ್ವರ್ತನೆ

ಬೆಂಗಳೂರು: ಸಮಸ್ಯೆ ಹೇಳಿಕೊಳ್ಳಲು ಹೋದ ಮಹಿಳೆಯ ಮೇಲೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಆಕ್ರೋಶಗೊಂಡು, ಕೈಯಲ್ಲಿದ್ದ ಮನವಿ ಪತ್ರವನ್ನು ಕಸಿದುಕೊಂಡು ದುರ್ವರ್ತನೆ ತೋರಿದ ಘಟನೆ ನಡೆದಿದೆ.
ವರ್ತೂರು ಕೆರೆ ಕೋಡಿ ಬಿದ್ದ ಪರಿಣಾಮ ವಸತಿ ಪ್ರದೇಶಗಳಿಗೆ ನೀರು ನುಗ್ಗಿತ್ತು. ಹಾನಿಗೊಳಗಾದ ಪ್ರದೇಶ ವೀಕ್ಷಣೆಗೆ ಲಿಂಬಾವಳಿ ತೆರಳಿದ್ದರು. ಈ ವೇಳೆ ಶಾಸಕರಿಗೆ ಮನವಿ ನೀಡಲು ಬಂದಿದ್ದ ಮಹಿಳೆಯ ಮೇಲೆ ಕೆಂಡಕಾರಿದ್ದಾರೆ.
ಮಹಿಳೆ ಹೇಳುವಂತೆ, ವೈಟ್ ಫೀಲ್ಡ್ ಬಳಿಯಿರುವ ರಾಜಕಾಲುವೆ ಬಳಿಯಲ್ಲಿ ತನ್ನ ಮನೆಯಿದ್ದು, ರಾಜಕಾಲುವೆ ಒತ್ತುವರಿ ಸಂಬಂಧ ಬಿಬಿಎಂಪಿ ಅಧಿಕಾರಿಗಳು ನಿನ್ನೆ ತೆರವಿಗೆ ಬಂದಿದ್ದರು. ಅಲ್ಲಿದ್ದ ವಸ್ತುಗಳಿಗೆಲ್ಲ ಹಾನಿ ಮಾಡಿದ್ದಾರೆ. ಈ ವಿಚಾರ ತಿಳಿದು ಸ್ಥಳಕ್ಕೆ ಹೋದಾಗ ಈ ಜಾಗ ಒತ್ತುವರಿಯಾಗಿದೆ ಎಂದಿದ್ದರು. ಒತ್ತುವರಿಯಾಗಿದ್ದರೆ, ನಮಗೆ ನೋಟಿಸ್ ನೀಡಬೇಕು ಎಂದು ಹೇಳಿದಾಗ ಅವರು ಸ್ಥಳದಿಂದ ತೆರಳಿದ್ದರು ಎಂದು ಮಹಿಳೆ ತಿಳಿಸಿದರು.
ಇದಾದ ಬಳಿಕ 60ರಿಂದ 70 ಕಾರ್ಯಕರ್ತರೊಂದಿಗೆ ಸ್ಥಳ ವೀಕ್ಷಣೆಗೆ ಶಾಸಕ ಲಿಂಬಾವಳಿ ಆಗಮಿಸಿದ್ದು, ಈ ವೇಳೆ ಮಹಿಳೆ ಸ್ಥಳಕ್ಕೆ ತೆರಳಿ, ಈ ಜಾಗ ಒತ್ತುವರಿ ಆಗಿಲ್ಲ. ಅದಕ್ಕೆ ಸರ್ಕಾರದ ಅಧಿಕೃತ ದಾಖಲೆ ಇದೆ ಎಂದು ಮಹಿಳೆ ಸ್ಕೆಚ್ ತೋರಿಸಿದಾಗ ಆಕ್ರೋಶಗೊಂಡ ಲಿಂಬಾವಳಿ, ನನಗೆ ಹೇಳಲು ನೀನ್ಯಾರು? ಏಯ್ ಸುಮ್ನಿರು ಎಂದು ಅವಾಜ್ ಹಾಕಿದರಲ್ಲದೇ ಅಸಹ್ಯವಾಗಿ ನನ್ನ ಕೈ ಎಳೆದು ಏಕವಚನದಲ್ಲಿ ಮಾತನಾಡಿದರು. ಕೈಯಲ್ಲಿದ್ದ ಕಾಪಿ ಕಿತ್ತು ಬಿಸಾಡಿ ಮುಖಕ್ಕೆ ಹೊಡೆಯುತ್ತೇನೆ ಎಂದರು ಎಂದು ಮಹಿಳೆ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka