ಮನಪಾ ನಿರ್ಲಕ್ಷ್ಯದಿಂದ ಆಸ್ಪತ್ರೆ ಸೇರಿದ ಮಹಿಳೆ: ನ್ಯಾಯ ಒದಗಿಸಲು ಆಮ್ ಆದ್ಮಿ ಪಾರ್ಟಿ ಆಗ್ರಹ
ಮಂಗಳೂರು: ನಗರದ ಅಂಬೇಡ್ಕರ್ ವೃತ್ತದ ಸಮೀಪ ಸೋಜ ಆರ್ಕೇಡ್ ಎದುರುಗಡೆ ಫುಟ್ಪಾತ್ ನಲ್ಲಿ ಖಾಸಗಿ ಟೆಲಿಕಾಂ ಕಂಪೆನಿಯುವರು ಅನಧಿಕೃತವಾಗಿ ತೋಡಿದ್ದ ಗುಂಡಿಗೆ ಬಿದ್ದು, ಗಂಭೀರ ಗಾಯಗೊಂಡು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫರಂಗಿಪೇಟೆ ಮೇರ್ಲಪದವು ನಿವಾಸಿ ಪ್ರೆಸ್ಸಿಲ್ಲ ಪಿರೇರಾ (57) ಅವರಿಗೆ ನ್ಯಾಯ ಒದಗಿಸುವಂತೆ ಆಮ್ ಆದ್ಮಿ ಪಾರ್ಟಿ ಒತ್ತಾಯಿಸಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೆಸ್ಸಿಲ್ಲ ಪಿರೇರಾ ಅವರನ್ನು ಆಮ್ ಆದ್ಮಿ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸಂತೋಷ್ ಕಾಮತ್ ನೇತೃತ್ವದ ನಿಯೋಗ ಭೇಟಿ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಬೆಂಬಲ ಘೋಷಿಸಿದ್ದಾರೆ.
ಡಿ.19ರಂದು ಸೋಜ ಆರ್ಕೇಡ್ ಎದುದುರಗಡೆ ಫುಟ್ಪಾತ್ ನಲ್ಲಿ ಖಾಸಗಿ ಟೆಲಿಕಾಂ ಕಂಪೆನಿಯುವರು ಅನಧಿಕೃತವಾಗಿ ತೋಡಿದ್ದ ಒಂಭತ್ತು ಅಡಿಯ ಗುಂಡಿಗೆ ಮಹಿಳೆ ಬಿದ್ದು ಗಾಯಗೊಂಡು ಆಸ್ಪತ್ರೆಯ ತೀವೃ ನಿಗಾ ಘಟಕಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ಮಹಾನಗರಪಾಲಿಕೆಯ ತೀವ್ರ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದ್ದು. ಇದುವರೆಗೆ ಅಧಿಕಾರಿಗಳಾಗಲಿ, ಶಾಸಕರು ಸೇರಿದಂತೆ ಜನಪ್ರತಿನಿಧಿಗಳಾಗಲಿ ಮಹಿಳೆಯನ್ನು ಭೇಟಿ ಮಾಡಿ ಆಗಿರುವ ಅನಾಹುತಕ್ಕೆ ಪರಿಹಾರ ನೀಡುವ, ಸಾಂತ್ವನ ಹೇಳುವ ಕೆಲಸ ಮಾಡಿಲ್ಲ.
ಪ್ರೆಸ್ಸಿಲ್ಲ ಕುಟುಂಬದವರು ಆರ್ಥಿಕವಾಗಿ ಸಬಲರಾಗಿಲ್ಲ, ತಮ್ಮದಲ್ಲದ ತಪ್ಪಿಗಾಗಿ ಶಿಕ್ಷೆ ಅನುಭವಿಸುವಂತಾಗಿದೆ. ಕಾನೂನು ನಿಯಮಗಳು ಇದ್ದರೂ ಕೂಡ ಸರಕಾರಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.ಜನಪ್ರತಿನಿಧಿಗಳು ಸಂಪೂರ್ಣವಾಗಿ ಜನಪರ ಕಾಳಜಿಯನ್ನು ಮರೆತು ಭ್ರಷ್ಟಚಾರದಲ್ಲಿ ತೊಡಗಿದ್ದಾರೆ ಎಂಬುದು ಅತ್ಯಂತ ವಿಷಾದನೀಯ ವಿಚಾರ ಎಂದು ಆಮ್ ಆದ್ಮಿ ಹೇಳಿದೆ.
ಮಂಗಳೂರು ನಗರ ಪೊಲೀಸರು ಈ ದುರ್ಘಟನೆಯನ್ನು ಲಘುವಾಗಿ ಪರಿಗಣಿಸಿರುವುದು ಸರಿಯಲ್ಲ. ಕೇವಲ ಸಿಆರ್ಪಿಸಿ 157 ಸೆಕ್ಷನಿನಲ್ಲಿ ಕೇಸು ದಾಖಲಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಸೆಕ್ಷನ್ ಮೂಲಕವೇ ಕೇಸು ದಾಖಲಿಸಬೇಕು. ನೇರವಾಗಿ ಮಂಗಳೂರು ನಗರ ಪಾಲಿಕೆಯ ಹಿರಿಯ ಅಧಿಕಾರಿಗಳೇ ಈ ನಿರ್ಲಕ್ಷ್ಯದ ಹೊಣೆ ಹೊರಬೇಕಾಗಿದೆ. ಅವರನ್ನು ಮೊದಲ ಆರೋಪಿಗಳನ್ನಾಗಿ ಮಾಡಬೇಕು. ಖಾಸಗಿ ಟೆಲಿಕಾಂ ಕಂಪೆನಿ ಯಾವುದೇ ಅನುಮತಿ ಪಡೆಯದೆ ಬೇಕಾ ಬಿಟ್ಟಿ ಗುಂಡಿ ಅಗೆದಿರುವುದು ಮಂಗಳೂರು ಮಹಾನಗರಪಾಲಿಕೆಯ ಕಾರ್ಯವೈಖರಿಯನ್ನು ತೋರಿಸುತ್ತದೆ ಎಂದು ಆಮ್ ಆದ್ಮಿ ಪಾರ್ಟಿ ಹೇಳಿದೆ.
ಡಬ್ಬಲ್ ಇಂಜಿನ್ ಸರಕಾರ ಮಂಗಳೂರಿನತ್ತ ಸ್ವಲ್ಪ ಗಮನ ಹರಿಸಬೇಕು. ನಗರಾಡಳಿತ ಸಂಪೂರ್ಣ ಕುಸಿದುಬಿದ್ದಿದೆ. ಮಂಗಳೂರು ಮಹಾನಗರಪಾಲಿಕೆ ಭ್ರಷ್ಟಾಚಾರದ ಕೂಪವಾಗಿದೆ. ಅದೇ ಕೂಪದಲ್ಲಿ ಆಡಳಿತ ಪಕ್ಷದ ಶಾಸಕರು ಕಚೇರಿ ಮಾಡಿಕೊಂಡು ಏನುಮಾಡುತ್ತಿದ್ದಾರೆ ಎಂದು ಜನ ಸಾಮನ್ಯರು ಪ್ರಶ್ನಿಸಬೇಕಾಗಿದೆ ಎಂದು ಎಎಪಿ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.
ಗುಂಡಿಗೆ ಬಿದ್ದು ಆಸ್ಪತ್ರೆ ಸೇರಿದ ಮಹಿಳೆಗೆ ನ್ಯಾಯ ದೊರೆಯುವ ತನಕ ಮಾತ್ರವಲ್ಲದೆ ಪಾಲಿಕೆಯ ದುರಾಡಳಿತವನ್ನು ನಿಲ್ಲಿಸುವ ತನಕ ಆಮ್ ಆದ್ಮಿ ಪಾರ್ಟಿ ಹೋರಾಟ ನಡೆಸಲಿದೆ. ಮಂಗಳೂರು ಮಹಾನಗರಪಾಲಿಕೆಯ ಐಎಎಸ್ ಅಧಿಕಾರಿ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಐಎಎಸ್ ಹುದ್ದೆಗೆ ಅಗೌರವ ತರುವ ರೀತಿಯಲ್ಲಿ ಅವರ ಕಾರ್ಯವೈಖರಿ ಇದೆ. ಪ್ರತಿಪಕ್ಷವಾದ ಕಾಂಗ್ರೆಸ್ಸ್ ಆಡಳಿತ ಪಕ್ಷ ಬಿಜೆಪಿಯೊಂದಿಗೆ ಶಾಮೀಲಾದಂತೆ ಸಂಶಯ ಬರುತ್ತದೆ ಎಂದು ಸಂತೋಷ್ ಕಾಮತ್ ಆತಂಕ ವ್ಯಕ್ತಪಡಿಸಿದ್ದಾರೆ.
ನಿಯೋಗದಲ್ಲಿ ಆಮ್ ಆದ್ಮಿ ಪಾರ್ಟಿಯ ಬೆನೆಟ್ ನವಿತಾ, ಜೈದೇವ್ ಕಾಮತ್, ಹಮೀದ್, ಜೋ ಮಾರ್ಟೀಸ್, ಅಸ್ಪರ್ ರಜಾಕ್, ರಿಫಾನ್ ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka