ಕೊರೊನಾ ನಡುವೆ ಮಜಾ ಮಾಡಲು ಬಂದ ಅರಣ್ಯಾಧಿಕಾರಿಗಳನ್ನು ತಡೆದ ಗ್ರಾಮಸ್ಥರ ಮೇಲೆ ಕೇಸು
ಚಿಕ್ಕಮಗಳೂರು: ಕೊರೊನಾ ಸಮಯದಲ್ಲಿ ಮಜಾ ಮಾಡಲು ಹೊರಟಿದ್ದ ಅರಣ್ಯಾಧಿಕಾರಿಗಳನ್ನು ಗ್ರಾಮಸ್ಥರು ತಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರ ಮೇಲೆಯೇ ಪೊಲೀಸರು ಎಫ್ ಐಆರ್ ದಾಖಲಿಸಿದ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಂತವೇರಿ ಬಳಿ, ಅರಣ್ಯಾಧಿಕಾರಿಗಳು ಪಾರ್ಟಿ ಮಾಡಲು 10ಕ್ಕೂ ಅಧಿಕ ವಾಹನಗಳಲ್ಲಿ ಬಂದಿದ್ದರು ಎಂದು ಹೇಳಲಾಗಿದೆ. ಅಧಿಕಾರಿಗಳು ಮೋಜು ಮಸ್ತಿಗಾಗಿ ತಮ್ಮ ಊರಿಗೆ ಬರುತ್ತಿದ್ದಾರೆ ಎಂದು ತಿಳಿದ ತಕ್ಷಣ ಗ್ರಾಮಸ್ಥರು ಅವರನ್ನು ತಡೆದಿದ್ದು, ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಊರಿಗೆ ಬರಬೇಡಿ ಎಂದು ಹೇಳಿದ್ದರು ಎಂದು ವರದಿಯಾಗಿದೆ.
ಸ್ಥಳೀಯರು ತಡೆದು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆಮ್ಮಣ್ಣಗುಂಡಿಯತ್ತ ತೆರಳಿದ್ದರು. ತಂಡದಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳು ಸೇರಿದಂತೆ ಸಿಸಿಎಫ್, ಡಿಎಫ್ ಓ ಕೂಡ ಆಗಮಿಸಿದ್ದರು ಎಂದು ಹೇಳಲಾಗಿದೆ. ಮಾಧ್ಯಮಗಳ ವರದಿಯ ಪರಿಣಾಮ ಅಧಿಕಾರಿಗಳು ಮುಜುಗರಕ್ಕೊಳಗಾಗಿದ್ದಾರೆ. ಈ ಘಟನೆ ನಡೆದ ಬಳಿಕ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಸೇರಿ, ನಾಲ್ವರ ಮೇಲೆ ಲಿಂಗದ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.