5ರಿಂದ 16 ವರ್ಷದ ಮಕ್ಕಳನ್ನು ಲೈಂಗಿಕವಾಗಿ ಬಳಸಿ ವೆಬ್ ಸೈಟ್ ಗೆ ವಿಡಿಯೋ ಅಪ್ ಲೋಡ್ ಮಾಡುತ್ತಿದ್ದ ಎಂಜಿನಿಯರ್ ನ ಪತ್ನಿಯ ಬಂಧನ
ಲಕ್ನೋ: 5ರಿಂದ 16 ವರ್ಷದ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡು, ವಿಡಿಯೋ ಮಾಡಿ ಡಾರ್ಕ್ ವೆಬ್ ಗಳ ಮೂಲಕ ಮಾರಾಟ ಮಾಡುತ್ತಿದ್ದ ಎಂಜಿನಿಯರ್ ಒಬ್ಬನ ಪತ್ನಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಮಕ್ಕಳ ಅಶ್ಲೀಲ ಚಿತ್ರ ಮಾರಾಟ ಹಾಗೂ ವೀಕ್ಷಣೆ, ಡೌನ್ ಲೋಡ್ ಮಾಡುವವರ ಮೇಲೆ ಸಿಬಿಐ ಅಧಿಕಾರಿಗಳು ಕಣ್ಣಿಟ್ಟಿದ್ದು, ಇದೀಗ ವಿವಿಧ ರಾಜ್ಯಗಳಲ್ಲಿ ಈ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಚಿತ್ರಕೂಟ, ಹಮಿರ್‌ಪುರ್ ಹಾಗೂ ಬಾಂದಾ ಜಿಲ್ಲೆಗಳಲ್ಲಿ 5 ವರ್ಷದಿಂದ 16 ವರ್ಷ ವಯಸ್ಸಿನ ಸುಮಾರು 50 ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿರುವುದು ಕಳೆದ ವರ್ಷ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ.
ಈ ಮಹಿಳೆ ಬಡ ಮಕ್ಕಳನ್ನು ಆಮಿಷ ಒಡ್ಡಿ ಲೈಂಗಿಕವಾಗಿ ಬಳಸಿಕೊಂಡು, ವಿಡಿಯೋ ಅಥವಾ ಫೋಟೋ ತೆಗೆದುಕೊಂಡು ಅಶ್ಲೀಲ ವೆಬ್ ಸೈಟ್ ಗಳಿಗೆ ಮಾರಾಟ ಮಾಡುತ್ತಿದ್ದಳು. ಕೆಲವು ಅಶ್ಲೀಲ ವೆಬ್ ಸೈಟ್ ಗಳ ಮೇಲೆ ಕೂಡ ಸಿಬಿಐ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಈಕೆಯ ವಿಡಿಯೋಗಳಲ್ಲಿ ಸುಮಾರು 50 ಮಕ್ಕಳು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ.
ಕಳೆದ ತಿಂಗಳು ಎಂಜಿನಿಯರ್ ನ್ನು ಬಂಧಿಸಲಾಗಿತ್ತು. ಈ ಪ್ರಕರಣವನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಎಂಜಿನಿಯರ್ ನ ಪತ್ನಿಯ ಕೃತ್ಯವೂ ಬಯಲಾಗಿತ್ತು. ಡಾರ್ಕ್ ವೆಬ್ ಮೂಲಕ ಮಕ್ಕಳ ಅಶ್ಲೀಲ ಚಿತ್ರಗಳು ಹರಿದಾಡುತ್ತಿರುವುದರ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಸದ್ಯ ಮಹಿಳೆಯ ಮನೆಯಿಂದ 8 ಲಕ್ಷ ಹಣ, ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್, ವೆಬ್ ಕ್ಯಾಮರಾ, ಪೆನ್ ಡ್ರೈವ್, ಮೆಮೊರಿ ಕಾರ್ಡ್, ಲೈಂಗಿಕ ಆಟಿಕೆಗಳುಇ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.