ಮಕ್ಕಳಿಂದ ಹಣ ವಸೂಲಿ ಮಾಡುವುದು ಎಷ್ಟು ಸರಿ?: ಸರ್ಕಾರದ ವಿರುದ್ಧ ವೆರೋನಿಕಾ ಕರ್ನೆಲಿಯೊ ಕಿಡಿ
ಸರ್ಕಾರಿ ಶಾಲೆಗಳ ಮಕ್ಕಳು ಪ್ರತಿತಿಂಗಳು 100 ರೂಪಾಯಿ ನೀಡಬೇಕು ಎಂದು ಸರಕಾರದ ಪ್ರಸ್ತಾವನೆ ಖಂಡನೀಯವಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೊ ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪ ಅನುಕೂಲ ಇರುವ ಕುಟುಂಬದವರೆಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ನೆಲೆಯಲ್ಲಿ ಆಂಗ್ಲ ಮಾಧ್ಯಮ ಹಾಗೂ ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಾರೆ. ಆದರೆ ಬಡ ಕುಟುಂಬದ ಮಕ್ಕಳು ಮಾತ್ರ ಸರಕಾರಿ ಶಾಲೆಗಳಿಗೆ ಬರುತ್ತಾರೆ. ಹಾಗಿರುವಾಗ ಆ ಬಡ ಮಕ್ಕಳಿಂದ ಹಣ ವಸೂಲಿ ಮಾಡುವುದು ಎಷ್ಟು ಸರಿ. ಸರಕಾರದ ಬಳಿ ಬಡವರಿಗೆ ಮೂಲಭೂತ ಶಿಕ್ಷಣ ಉಚಿತವಾಗಿ ನೀಡುವ ಸಾಮರ್ಥ್ಯವಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳ ಕೊರತೆಯಿಂದ ಈಗಾಗಲೇ ಹಲವಾರು ಶಾಲೆಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಬಂದರೆ ಇನ್ನು ಕೆಲವು ಶಾಲೆಗಳು ಮೂಲಭೂತ ಕೊರತೆಯನ್ನು ಎದುರಿಸುತ್ತವೆ. ಇಂತಹ ಶಾಲೆಗಳ ಅಭಿವೃದ್ದಿಗೆ ಸರಕಾರ ಆಸಕ್ತಿ ವಹಿಸುವುದನ್ನು ಬಿಟ್ಟು ಮಕ್ಕಳಿಂದ ಹಣ ಒಟ್ಟು ಮಾಡಿ ಅದರಿಂದ ಅಭಿವೃದ್ದಿ ಪಡಿಸುವ ಹಂತಕ್ಕೆ ತಲುಪಿರುವುದು ಶೋಚನೀಯವಾಗಿದೆ.
ಯಾವುದೋ ಇಲ್ಲ ಸಲ್ಲದ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ವೆಚ್ಚ ಮಾಡಲು ಸರಕಾರದಲ್ಲಿ ಹಣ ಇದ್ದು ವಿದ್ಯಾರ್ಥಿಗಳ ಶಿಕ್ಷಣದ ವಿಚಾರ ಬಂದಾಗ ಹಣ ಇಲ್ಲ ಎನ್ನುವ ವರ್ತನೆ ಸರಿಯಲ್ಲ. ಸರಕಾರಿ ಶಾಲೆಗಳ ಅಭಿವೃದ್ದಿಗೆ ಸರಕಾರ ಒತ್ತು ಕೊಟ್ಟು ಅನುದಾನ ಒದಗಿಸುವ ಕೆಲಸ ಮಾಡಬೇಕು. ಅಲ್ಲದೆ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವತ್ತ ಸರಕಾರ ಗಮನ ಹರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka