ಮಕ್ಕಳು ಮದ್ಯ ಸೇವಿಸಿ ತೂರಾಡುವ ವಿಡಿಯೋ ವೈರಲ್ | ಪೋಷಕರಲ್ಲಿ ಆತಂಕ
ಬೆಂಗಳೂರು: ಕೊವಿಡ್ 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಪೋಷಕರನ್ನು ಬೆಚ್ಚಿ ಬೀಳಿಸಿತ್ತು. 10ರಿಂದ 7 ವರ್ಷ ವಯಸ್ಸಿನ ಮಕ್ಕಳು ಮದ್ಯದ ನಶೆಯಲ್ಲಿ ತೇಲಾಡುತ್ತಿರುವ ವಿಡಿಯೋ ರಾಜ್ಯದ ಜನರಲ್ಲಿ ಆತಂಕವನ್ನುಂಟು ಮಾಡಿತ್ತು. ಇದೀಗ ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ಮಕ್ಕಳು ಮದ್ಯ ಸೇವಿಸಬಾರದು ಎಂದು ಪೋಷಕರು ಸಣ್ಣ ವಯಸ್ಸಿನಲ್ಲಿಯೇ ಸಾಕಷ್ಟು ಪರಿಶ್ರಮಪಟ್ಟರೆ, ಕೆಲವು ಕಿಡಿಗೇಡಿಗಳು ವಿಡಿಯೋ ವೈರಲ್ ಮಾಡುವ ಉದ್ದೇಶದಿಂದಲೇ ಬಾಳೆ ತೋಟವೊಂದರಲ್ಲಿ 10 ವರ್ಷದೊಳಗಿನ ಮಕ್ಕಳನ್ನು ಬಾಡೂಟ ಹಾಗೂ ಮದ್ಯ ಸೇವಿಸುವಂತೆ ಪ್ರೇರೇಪಿಸಿ ವಿಡಿಯೋ ಮಾಡಿದ್ದಾರೆ ಎನ್ನುವ ಅನುಮಾನಗಳಿಗೆ ಕಾರಣವಾಗಿದೆ.
ವಿಡಿಯೋದಲ್ಲಿ ಕಂಡು ಬರುವಂತೆ, ಪುಟ್ಟ ಮಕ್ಕಳು ಮದ್ಯ ಹಾಗೂ ಬಾಡೂಟ ಸೇವಿಸುತ್ತಾ, ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ನಿಂದಿಸುವ ದೃಶ್ಯಗಳು ವಿಡಿಯೋದಲ್ಲಿ ಕಂಡು ಬಂದಿದೆ. ಈ ವಿಡಿಯೋ ಮಾಡಿರುವ ಸ್ಥಳ ಎಲ್ಲಿ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ, ಆದರೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಈ ಘಟನೆಯನ್ನು ಚಿತ್ರೀಕರಣ ಮಾಡಲಾಗಿದೆ ಎನ್ನುವ ಅನುಮಾನ ಸೃಷ್ಟಿಯಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುವಂತೆ ಒತ್ತಾಯ ಕೇಳಿ ಬಂದಿದೆ.
ಮಕ್ಕಳಿಗೆ ಮದ್ಯ ಕುಡಿಸಿ ಮಾಡಿಸುವುದು ಹಾಸ್ಯ ಅಲ್ಲ, ಅದೊಂದು ದುರಂತ. ಈ ವಿಡಿಯೋ ಸಾರ್ವಜನಿಕರಾದ ನಿಮ್ಮ ಮೊಬೈಲ್ ಗಳಿಗೂ ಬಂದಿರಬಹುದು. ನೀವು ಕೂಡ ಇದೊಂದು ಹಾಸ್ಯ ಎಂದು ನಕ್ಕಿರಬಹುದು. ಆದರೆ ಇಂತಹದ್ದನ್ನು ಯಾರೂ ಕೂಡ ಪ್ರೋತ್ಸಾಹಿಸುವುದು ಸರಿಯಲ್ಲ. ಆ ವಿಡಿಯೋದಲ್ಲಿರುವ ಮಕ್ಕಳು ತಮ್ಮ 10 ವರ್ಷದಲ್ಲಿಯೇ ಕುಡಿಯುವ ಚಟ ಬೆಳೆಸಿಕೊಂಡರೆ, ಅವರ ಮುಂದಿನ ಭವಿಷ್ಯ ಹೇಗಿರಬಹುದು ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಶಾಲೆಗೆ ಹೋಗುವ ಪುಟ್ಟ ಮಕ್ಕಳ ಕೈಯಲ್ಲಿ ವಿದ್ಯೆ ಕಲಿಯುವ ಪುಸ್ತಕ ಇರಬೇಕೇ ಹೊರತು, ಮದ್ಯದ ಬಾಟಲಿ ಅಲ್ಲ. ಈ ವಿಡಿಯೋ ನಿಮ್ಮ ಮೊಬೈಲ್ ಗೆ ಬಂದರೆ, ದಯವಿಟ್ಟು ಶೇರ್ ಮಾಡದಿರಿ, ಹಾಗೆಯೇ ಆ ವಿಡಿಯೋವನ್ನು ಶೇರ್ ಮಾಡಿದವರಿಗೂ ಈ ಬಗ್ಗೆ ಜಾಗೃತಿ ಮೂಡಿಸಿ. ಈ ಘಟನೆಯ ಮಾಹಿತಿ ನಿಮಗಿದ್ದರೆ, ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.