ಮಾಂಸಾಹಾರದ ಬಗ್ಗೆ ಹಿರಿಯ ಪೇಜಾವರ ಶ್ರೀಗಳು ಏನು ಹೇಳಿದ್ದರು? | ವಿಡಿಯೋ ವೈರಲ್ - Mahanayaka
1:17 AM Wednesday 11 - December 2024

ಮಾಂಸಾಹಾರದ ಬಗ್ಗೆ ಹಿರಿಯ ಪೇಜಾವರ ಶ್ರೀಗಳು ಏನು ಹೇಳಿದ್ದರು? | ವಿಡಿಯೋ ವೈರಲ್

pejawar shri
22/11/2021

ರಾಜ್ಯದಲ್ಲಿ ಸದ್ಯ ಸಂಗೀತ ನಿರ್ದೇಶಕ ಹಂಸಲೇಖ ಅವರು ನೀಡಿದ ಹೇಳಿಕೆ ಮಾಂಸಾಹಾರದ ಬಗೆಗಿನ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ಪೇಜಾವರಶ್ರೀಗಳು ಟಿವಿ ಸಂದರ್ಶನವೊಂದರಲ್ಲಿ ಮಾಂಸಾಹಾರದ ಬಗ್ಗೆ ಆಡಿರುವ ಮಾತುಗಳು ವೈರಲ್ ಆಗಿವೆ. ಈ ಸಂದರ್ಶನವನ್ನು ಹಿರಿಯ ಪತ್ರಕರ್ತ ರಂಗನಾಥ್ ಅವರು ನಡೆಸಿದ್ದಾರೆ.

ಸಂದರ್ಶಕರು: “ಪುರಾಣ ಕಾಲದಿಂದಲೂ ಬಂದ ಮಾಂಸದ ಭಕ್ಷಣೆ ಪೇಜಾವರ ಶ್ರೀಗಳು ಹೇಳಿದ ತಕ್ಷಣ ನಿಂತು ಬಿಡುತ್ತಾ?”

ಪೇಜಾವರಶ್ರೀ: “ಪುರಾಣ ಕಾಲದಿಂದ ಬಂದಿರುವುದು ನಿಂತು ಹೋಗಿ ಸಾವಿರಾರು ವರ್ಷಗಳಾಗಿವೆ. ಪುರಾಣ ಕಾಲದಲ್ಲಿದ್ದದ್ದು, ಕಲಿಯುಗ ಪ್ರಾರಂಭವಾದ ಮೇಲೆ, ಮೂರು ನಾಲ್ಕು ಸಾವಿರ ವರ್ಷಗಳಿಂದ ನಿಂತು ಹೋಗಿದೆ. ಪೇಜಾವರರು ಹೇಳಿದ್ದಲ್ಲ. ಬ್ರಾಹ್ಮಣರಲ್ಲಿ, ಇಂತಹದ್ದೊಂದು ಪದ್ಧತಿ ಇತ್ತು, ಇಲ್ಲ ಎಂಬ ಬಗ್ಗೆ ಒಂದು ಚರ್ಚೆ ಇದೆ. ಅದು ಬೇರೆ ವಾದ. ಇತ್ತು ಎಂದು ಇಟ್ಟುಕೊಂಡರೂ ಕೂಡ, ಅದನ್ನೆಲ್ಲ ನಿಲ್ಲಿಸಿದ್ದಾರೆ. ಮಾಂಸಾಹಾರ ಕೂಡದು, ಅದು ಬ್ರಾಹ್ಮಣರಲ್ಲಿ ಇರಬಾರದು ಅಂತ ಹೇಳಿ. ಹಿಂದಿನವರು ಹಠ ತೊಟ್ಟು, ಅನೇಕ ಶತಮಾನಗಳ ಪ್ರಯತ್ನದಿಂದ ನಿಂತು ಹೋಗಿದೆ.”

ಪೇಜಾವರಶ್ರೀಗಳು ಮುಂದುವರಿಯುತ್ತಾ, “ನಿಂತು ಹೋಗಿದ್ದನ್ನು ಪುನಃ ಪ್ರಾರಂಭವಾಗಿದೆ. ಯಾಕೆಂದರೆ, ಇವತ್ತಿನ ವಾತಾವರಣದಲ್ಲಿ ಬ್ರಾಹ್ಮಣರು ಕೂಡ ಗುಟ್ಟುಗುಟ್ಟಾಗಿ, ಕೆಲವರು ಬಹಿರಂಗವಾಗಿ ಮದ್ಯ, ಮಾಂಸವನ್ನು ಸ್ವೀಕಾರ ಮಾಡುತ್ತಿದ್ದಾರೆ. ಅದಕ್ಕೋಸ್ಕರ ಬ್ರಾಹ್ಮಣರ ಸಭೆಯಲ್ಲಿ ಮಾಂಸಾಹಾರಕ್ಕೆ ಅವಕಾಶ ಕೊಡಬಾರದು ಅಂತ, ಬ್ರಾಹ್ಮಣ್ಯವನ್ನು ಮತ್ತಷ್ಟು ಕಡ್ಡಾಯವಾಗಿ ಉಳಿಸಿಕೊಳ್ಳಬೇಕು. ನಮಗೆ ಎರಡು ಜವಾಬ್ದಾರಿ ಇದೆ. ಒಂದು ಬ್ರಾಹ್ಮಣ್ಯದ ರಕ್ಷಣೆಯಾಗಬೇಕು, ಇನ್ನೊಂದು ಹಿಂದೂತ್ವ ರಕ್ಷಣೆಯಾಗಬೇಕು.”

ಸಂದರ್ಶಕರು:ಬ್ರಾಹ್ಮಣ್ಯಕ್ಕೂ ಹಿಂದುತ್ವಕ್ಕೂ ಸಂಬಂಧ ಇದೆಯಾ?”

ಪೇಜಾವರ ಶ್ರೀಗಳು: ಸಂಬಂಧ ಇಲ್ಲ, ಎರಡೂ ಬೇಕು. ಬ್ರಾಹ್ಮಣ್ಯ ಅದು ಬ್ರಾಹ್ಮಣರಿಗೆ ಮಾತ್ರವೇ ಸೀಮಿತ, ಹಿಂದೂತ್ವ ಎಲ್ಲರಿಗೂ ಸಂಬಂಧಿಸಿದ್ದು.”

ಈ ಒಂದು ವಿಡಿಯೋದ ತುಣುಕು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಹಂಸಲೇಖ ಅವರ ಹೇಳಿಕೆಯ ಬೆನ್ನಲ್ಲೇ ಮುನ್ನೆಲೆಗೆ ಬಂದ ಮಾಂಸಾಹಾರದ ಚರ್ಚೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಒಂದೆಡೆ ಮಾಂಸಪ್ರಿಯರು, ಸಾಮಾಜಿಕ ಜಾಲತಾಣಗಳಲ್ಲಿ ಮಾಂಸಾಹಾರಗಳನ್ನು ಸೇವಿಸುತ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಈ ನಡುವೆ ಮಾಂಸಾಹಾರದ ಬಗ್ಗೆ ಸ್ವತಃ ಪೇಜಾವರ ಶ್ರೀಗಳು ಯಾವ ಅಭಿಪ್ರಾಯ ಹೊಂದಿದ್ದರು ಎಂಬ ಬಗೆಗಿನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚಿನ ಸುದ್ದಿ