ಕಾರು ನುಗ್ಗಿಸಿ ಇಬ್ಬರನ್ನು ಕೊಂದ ಪ್ರಕರಣ: ಆರೋಪಿ ಇಸ್ಲಾಮಿನ ಪ್ರಬಲ ಟೀಕಾಕಾರನ ಬಂಧನ
ಜರ್ಮನಿಯ ಕ್ರಿಸ್ಮಸ್ ಮಾರುಕಟ್ಟೆಯ ಮೇಲೆ ಕಾರು ನುಗ್ಗಿಸಿ ಇಬ್ಬರನ್ನು ಕೊಂದು 68 ಮಂದಿಯನ್ನು ಗಾಯಗೊಳಿಸಿದ ವ್ಯಕ್ತಿಯನ್ನು ಸೌದಿ ಅರೇಬಿಯದ ತಾಲಿಬ್ ಎಂದು ಗುರುತಿಸಲಾಗಿದೆ. ಈತ ಇಸ್ಲಾಮನ್ನು ತೊರೆದ ವ್ಯಕ್ತಿಯಾಗಿದ್ದಾನೆ ಮಾತ್ರವಲ್ಲ ಇಸ್ಲಾಮಿನ ಪ್ರಬಲ ಟೀಕಾಕಾರನಾಗಿಯೂ ಗುರುತಿಸಿಕೊಂಡಿದ್ದಾನೆ. ಹಾಗೆಯೇ ವಲಸಿಗ ವಿರೋಧಿಯಾದ ಜರ್ಮನಿಯ ಬಲಪಂಥೀಯ ರಾಜಕೀಯ ಪಕ್ಷ ಆಲ್ಟರ್ನೇಟಿವ್ ಫಾರ್ ಜರ್ಮನಿ ಯ ಬೆಂಬಲಿಗನಾಗಿದ್ದಾನೆ. ಈ ಕುರಿತಂತೆ ಇಂಡಿಯಾ ಟುಡೇ ವರದಿ ಮಾಡಿದೆ.
ಈತ 2006ರಿಂದ ಜರ್ಮನಿಯಲ್ಲಿ ವಾಸಿಸುತ್ತಿದ್ದಾನೆ. ಈತ ಸೈಕಿಯಾಟ್ರಿ ಮತ್ತು ಸೈಕೋತೆರಪಿ ಚಿಕಿತ್ಸೆಯಲ್ಲಿ ತಜ್ಞನಾಗಿದ್ದಾನೆ. ಬಾಡಿಗೆಯ ಬಿಎಂಡಬ್ಲ್ಯೂ ಕಾರನ್ನು ಬಳಸಿಕೊಂಡು ಈತ ಜನರ ನಡುವೆ ನುಗ್ಗಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ 1974ರಲ್ಲಿ ಸೌದಿ ಅರೇಬಿಯಾದಲ್ಲಿ ಜನಿಸಿದ್ದು 2006ರಲ್ಲಿ ಜರ್ಮನಿಯಲ್ಲಿ ಶಾಶ್ವತವಾಗಿ ನೆಲೆಸುವ ವಿಸಾ ಪಡಕೊಂಡಿದ್ದಾನೆ. 2016ರಲ್ಲಿ ಈತನನ್ನು ವಲಸಿಗ ಎಂದು ಸರಕಾರ ಮಾನ್ಯ ಮಾಡಿದೆ.
ಇಸ್ಲಾಮನ್ನು ತೊರೆದ ಸೌದಿ ಮತ್ತು ಗಲ್ಫ್ ರಾಷ್ಟ್ರಗಳ ಮಂದಿಗೆ ನೆರವಾಗುವುದಕ್ಕಾಗಿ ಈತ ವೆಬ್ಸೈಟ್ ಅನ್ನು ಆರಂಭಿಸಿದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ. ತನ್ನ ವಿಚಾರಗಳು ಸೌದಿ ಅರೇಬಿಯಾದಲ್ಲಿ ಅಪಾಯವನ್ನು ತಂದೊಡ್ಡಬಹುದು ಎಂಬ ಕಾರಣಕ್ಕಾಗಿ ಆತ ಸೌದಿಯನ್ನು ತೊರೆದು ಜರ್ಮನಿಯನ್ನು ಆಶ್ರಯಿಸಿದ್ದಾನೆ ಎಂದು ಕೂಡ ವರದಿಯಾಗಿದೆ.
ಇದೇ ವೇಳೆ ಸೌದಿಯಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು ಆತನನ್ನು ತನಗೆ ಹಸ್ತಾಂತರಿಸುವಂತೆ ಸೌದಿ ಅರೇಬಿಯಾ ಜರ್ಮನಿಯೊಂದಿಗೆ ಕೇಳಿಕೊಂಡಿತ್ತು. ಆದರೆ ಜರ್ಮನಿ ನಿರಾಕರಿಸಿತ್ತು. ಈತನ ವಿರುದ್ಧ ಭಯೋತ್ಪಾದನೆ ಮತ್ತು ಮಧ್ಯ ಏಷ್ಯಾದಿಂದ ಹೆಣ್ಣು ಮಕ್ಕಳನ್ನು ಯುರೋಪಿಯ ಯುರೋಪಿಯನ್ ರಾಷ್ಟ್ರಗಳಿಗೆ ಸಾಗಾಟ ಮಾಡಿದ ಪ್ರಕರಣ ಸೌದಿ ಅರೇಬಿಯಾದಲ್ಲಿ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj