ಸಮುದ್ರದಲ್ಲಿ ಮುಳುಗುತ್ತಿದ್ದ ಸಹೋದರನ ಪುತ್ರಿಯನ್ನು ರಕ್ಷಿಸಿ ತಾನೇ ಬಲಿಯಾದ ಬೆಂಗಳೂರು ಮೂಲದ ವ್ಯಕ್ತಿ!
ಮಂಗಳೂರು: ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ ಸಹೋದರನ ಪುತ್ರಿಯನ್ನು ರಕ್ಷಿಸಿದ ವ್ಯಕ್ತಿಯೊಬ್ಬರು, ತಾನೇ ಸಮುದ್ರದ ಅಲೆಗಳಿಗೆ ಸಿಲುಕಿ ಬಲಿಯಾದ ಹೃದಯ ವಿದ್ರಾವಕ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಡಿ.29ರಂದು ಮಧ್ಯಾಹ್ನ ನಡೆದಿದೆ.
ಕೆ.ಎಂ. ಸಜ್ಜದ್ ಅಲಿ(45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಶಿವಾಜಿನಗರದ ಎಚ್.ಪಿ.ಕೆ. ರೋಡ್ ನಿವಾಸಿ ದಿ.ಖಝೂಮ್ ಅಬ್ದುಲ್ ಶೇಖ್ ಎಂಬವರ ಪುತ್ರ ಎಂದು ತಿಳಿದು ಬಂದಿದೆ.
ಸಜ್ಜದ್ ಅವರ ಹಿರಿಯ ಸಹೋದರನ ಪುತ್ರಿ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗಳಿಗೆ ಸಿಲುಕಿದ್ದು, ಈ ವೇಳೆ ಸಜ್ಜದ್ ಆಕೆಯನ್ನು ರಕ್ಷಿಸಿದ್ದಾರೆ. ಆದರೆ ಇದೇ ವೇಳೆ ಅವರೇ ಅಲೆಗಳಿಗೆ ಸಿಲುಕಿದ್ದು, ಅಲೆಗಳು ಸಜ್ಜದ್ ಅವರನ್ನು ಸಮುದ್ರಕ್ಕೆ ಎಳೆದೊಯ್ದಿದೆ. ಆದರೂ ನೀರಿನಲ್ಲಿ ಮುಳುಗಿದ ಅವರ ವಾಪಸ್ ದಡಕ್ಕೆ ಬಂದಿದ್ದು, ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ದಾರಿ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಸಜ್ಜದ್, ಸಂಬಂಧಿಕರ ಮದುವೆಗೆಂದು ತಮ್ಮ ಕುಟುಂಬಸ್ಥರ ಜೊತೆಗೆ ಮಂಗಳೂರಿನ ಪಡೀಲ್ ಗೆ ಬಂದಿದ್ದರು. ಇದೇ ವೇಳೆ ಸೋಮೇಶ್ವರ ಸಮುದ್ರ ತೀರಕ್ಕೆ ವಿಹಾರಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
2015ರಲ್ಲಿ ಪುತ್ತೂರಿನ ನಿವಾಸಿ ಆಲಿಮಾ ರಶೀದಾ ಎಂಬವರನ್ನು ಸಜ್ಜದ್ ವಿವಾಹವಾಗಿದ್ದರು. ವಾರಕ್ಕೊಮ್ಮೆ ಊರಿಗೆ ಬರುತ್ತಿದ್ದರು. ಡಿ.29ರಂದು ಮದುವೆಗೆಂದು ಕುಟುಂಬಸ್ಥರೊಂದಿಗೆ ಮಂಗಳೂರಿಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7