ಮಾನಸಿಕ ಅಸ್ವಸ್ಥ ಯುವಕ ಗುಣಮುಖವಾದ್ರೂ ಸ್ವೀಕರಿಸಲು ಒಪ್ಪದ ತಂದೆ! - Mahanayaka

ಮಾನಸಿಕ ಅಸ್ವಸ್ಥ ಯುವಕ ಗುಣಮುಖವಾದ್ರೂ ಸ್ವೀಕರಿಸಲು ಒಪ್ಪದ ತಂದೆ!

udupi
10/11/2022

ಉಡುಪಿ : 7 ತಿಂಗಳ ಹಿಂದೆ ಉಪ್ಪೂರಿನ ರಾಷ್ಟಿಯ ಹೆದ್ದಾರಿಯಲ್ಲಿ ಮಾನಸಿಕ ಅಸ್ವಸ್ಥಗೊಂಡು ಭಯದ ವಾತಾವರಣ ಸೃಷ್ಟಿಸಿದ್ದ ರಾಜಸ್ಥಾನ  ಮೂಲದ ರವಿ ಸಿಂಗ್ (27) ಸಮಾಜ ಸೇವಕರ ಸ್ಪಂದನೆ ಹಾಗೂ 7 ತಿಂಗಳ ನಿರಂತರ ಚಿಕಿತ್ಸೆಯಿಂದ ಬಹುತೇಕ ಗುಣಮುಖನಾಗಿದ್ದಾನೆ. ಆದರೆ ಮಗನನ್ನು ಸ್ವೀಕರಿಸಲು ತಂದೆ ಒಪ್ಪದ ಕಾರಣ ಅನಿವಾರ್ಯವಾಗಿ ಆತ ಮತ್ತೆ ಆಶ್ರಮವನ್ನು ಸೇರುವಂತಾಗಿದೆ.


Provided by

ರವಿ ಸಿಂಗ್‌ ನನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಅಂದು ರಕ್ಷಿಸಿ ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.  ನಂತರ ಯುವಕನ ತಂದೆಯನ್ನು ಸಂಪರ್ಕಿಸಿ ಮಾಹಿತಿ ನೀಡಿದರೂ, ತಂದೆ ಮಗನನ್ನು ಸ್ವೀಕರಿಸಲು ಒಪ್ಪಿರಲಿಲ್ಲ.

ಮಣಿಪಾಲ ಕೆಎಂಸಿಯ ಅಂಗ ಸಂಸ್ಥೆ `ಹೊಂಬೆಳಕು ‘ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರ ಯುವಕನಿಗೆ ಉಚಿತವಾಗಿ ಆರೈಕೆ ಹಾಗೂ ಆಶ್ರಯ ನೀಡಲು ಮುಂದೆ ಬಂದಿದ್ದು, ಇಲ್ಲಿ 6 ತಿಂಗಳ ಕಾಲ ಆರೈಕೆ ಪಡೆದ ರವಿ ಸಿಂಗ್ ಇದೀಗ ಬಹಳಷ್ಟು ಚೇತರಿಸಿಕೊಂಡಿದ್ದಾನೆ. ಹೇಳಿದ ಕೆಲಸ ಕಾರ್ಯಗಳನ್ನು ನಿರಾತಂಕವಾಗಿ ಮಾಡುತ್ತಿದ್ದಾನೆ.


Provided by

ಹೀಗಾಗಿ ವಿಶು ಶೆಟ್ಟಿ ಅವರು ಮತ್ತೊಮ್ಮೆ ಯುವಕನ ತಂದೆ ರಾಜಸ್ಥಾನದ ಮಹೇಂದ್ರ ಸಿಂಗ್ ಅವರನ್ನು ಸಂಪರ್ಕಿಸಿ ಮಗನನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದಾರೆ. `ನನಗೆ ಮಗ ಬೇಡ, ಆತನನ್ನು ಎಲ್ಲಿಯಾದರೂ ಬಿಟ್ಟು ಬಿಡಿ ‘ ಎಂಬ ಉಡಾಫೆ ಉತ್ತರ ತಂದೆಯಿಂದ  ಸಿಕ್ಕಿದೆ.  ಆಸ್ಪತ್ರೆ ಹಾಗೂ ಪುನರ್ವಸತಿ ಕೇಂದ್ರದ ಮೂಲಕವೂ ಯುವಕನ ತಂದೆಗೆ ಪೋನಾಯಿಸಿ ಮನವೊಲಿಸುವ ಪ್ರಯತ್ನ ಕೂಡಾ ವಿಫಲವಾಗಿದೆ.

ರವಿ ಸಿಂಗ್‌ ನನ್ನು ರೈಲಿನ ಮೂಲಕ ರಾಜಸ್ಥಾನಕ್ಕೆ ಒಬ್ಬಂಟಿಯಾಗಿ ಕಳುಹಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವೈದ್ಯರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶು ಶೆಟ್ಟಿ ಅವರು ಮಂಜೇಶ್ವರ ದೈಗುಳಿಯ ಶ್ರೀಸಾಯಿ ಸೇವಾಶ್ರಮವನ್ನು ಸಂಪರ್ಕಿಸಿದಾಗ ಅದರ ಮುಖ್ಯಸ್ಥರು ರವಿ ಸಿಂಗ್‌ನಿಗೆ ಆಶ್ರಯ ನೀಡಲು ಒಪ್ಪಿದ ಹಿನ್ನೆಲೆಯಲ್ಲಿ ವಿಶು ಶೆಟ್ಟಿ ಅವರು ಆತನನ್ನು ಬುಧವಾರ ಆಶ್ರಮಕ್ಕೆ ದಾಖಲಿಸಿದ್ದಾರೆ.

ಮಗನನ್ನು ಸ್ವೀಕರಿಸಲು ಒಪ್ಪದ ಯುವಕನ ತಂದೆಯ ಮೇಲೆ ಸಂಬಂಧಪಟ್ಟ ಇಲಾಖೆಗಳು ಕಾನೂನು ಕ್ರಮ ಜರುಗಿಸಿ ಯುವಕನನ್ನು ಹಸ್ತಾಂತರಿಸಬೇಕು ಎಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳತ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಸೇವಾ ಕಾರ್ಯದಲ್ಲಿ ಪ್ರದೀಪ್ ಅಜ್ಜರಕಾಡು ಹಾಗೂ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ