ನಡುರಸ್ತೆಯಲ್ಲಿ ಪ್ರಯಾಣಿಕರನ್ನು ಇಳಿಸಿ ಆಟೋ ಚಾಲಕ ಪರಾರಿ | ಮಾನವೀಯತೆ ಮೆರೆದ ಪೊಲೀಸರು

ಚಿಕ್ಕಬಳ್ಳಾಪುರ: ಸಾರ್ವಜನಿಕರನ್ನು ಹಿಗ್ಗಾಮುಗ್ಗಾ ಥಳಿಸಿ ಭಯಭೀತಿ ಸೃಷ್ಟಿಸಿದ ಪೊಲೀಸರು ಒಂದೆಡೆ ಜನರ ಆಕ್ರೋಶಕ್ಕೆ ಕಾರಣರಾದರೆ, ಇನ್ನೊಂದೆಡೆ, ಸಂಕಷ್ಟದಲ್ಲಿ ಸಿಲುಕಿದ ಸಾರ್ವಜನಿಕರಿಗೆ ನೆರವು ನೀಡಿದ ಪೊಲೀಸರಿಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಾಕ್ ಡೌನ್ ನಿಂದಾಗಿ ವಾಹನ ಸಿಗದೇ ಪರದಾಡುತ್ತಿದ್ದ ಮಹಿಳೆಯರನ್ನು ಕಾನ್ಸ್ ಟೇಬಲ್ ವೋರ್ವರು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಗೂಳೂರು ಗ್ರಾಮದಿಂದ ಬಾಗೇಪಲ್ಲಿ ಪಟ್ಟಣಕ್ಕೆ ಆಟೋದಲ್ಲಿ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಆಗಮಿಸಿದ್ದರು. ಈ ವೇಳೆ ಪೊಲೀಸರನ್ನು ಕಂಡು ವಾಹನ ಸೀಝ್ ಆಗುವ ಭಯದಿಂದ ಆಟೋ ಚಾಲಕ ಪ್ರಯಾಣಿಕರನ್ನು ನಡುರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಇದರಿಂದಾಗಿ ರಸ್ತೆಯಲ್ಲಿಯೇ ಆಹಾರವೂ ಇಲ್ಲದೇ ಮಹಿಳೆಯರು ಅಸ್ವಸ್ಥಗೊಂಡಿದ್ದರು. ಈ ವೇಳೆ ಕಾನ್ಸ್ ಟೇಬಲ್ ಧನಂಜಯ್ ಎಂಬವರು ತಮ್ಮ ಬೈಕ್ ನಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ.