“ಮನೆ ಬಿಟ್ಟು ಬಾ.. ಮದುವೆಯಾಗೋಣ” ಎಂದ ಪ್ರೇಮಿ | ಯುವತಿ ನಿರಾಕರಿಸಿದಾಗ ಆತ ಮಾಡಿದ್ದೇನು ಗೊತ್ತಾ?
ಬೆಳ್ತಂಗಡಿ: ಮನೆ ಬಿಟ್ಟು ಬಾ… ಮದುವೆಯಾಗೋಣ ಎಂದು ಪ್ರೇಮಿ ಕರೆದಿದ್ದು, ಇದಕ್ಕೆ ಪ್ರೇಯಸಿ ಒಪ್ಪದ ಕಾರಣ ಆಕೆಯ ಮನೆಗೆ ನುಗ್ಗಿದ ಯುವಕ ಆಕೆಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ಲಾಯಿಲ ಸಮೀಪದಲ್ಲಿ ಏಪ್ರಿಲ್ 6ರ ರಾತ್ರಿ ನಡೆದಿದೆ.
ಪುಂಜಾಲಕಟ್ಟೆ ನಿವಾಸಿ 22 ವರ್ಷ ವಯಸ್ಸಿನ ಶಮೀರ್ ಎಂಬಾತ ಈ ಕೃತ್ಯ ಎಸಗಿದ ಯುವಕನಾಗಿದ್ದಾನೆ. ಈತ ಯುವತಿಯನ್ನು ಕಳೆದ 5 ವರ್ಷಗಳಿಂದಲೂ ಪ್ರೀತಿಸುತ್ತಿದ್ದ. ಮದುವೆಯಾಗೋಣ, ನೀನು ಮನೆ ಬಿಟ್ಟು ನನ್ನೊಂದಿಗೆ ಬಾ ಎಂದು ಆತ ಕರೆದಿದ್ದಾನೆ. ಆದರೆ ಯುವತಿಗೆ ಇದು ಇಷ್ಟವಿರಲಿಲ್ಲ. ಹಾಗಾಗಿ ಆಕೆ ತಾನು ಬರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾಳೆ ಎಂದು ಹೇಳಲಾಗಿದ್ದು, ಇದರಿಂದ ರೊಚ್ಚಿಗೆದ್ದ ಶಮೀರ್ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
ಮಂಗಳವಾರ ರಾತ್ರಿ ಸುಮಾರು 10:20ರ ವೇಳೆಗೆ ಏಕಾಏಕಿ ಯುವತಿಯ ಮನೆಗೆ ನುಗ್ಗಿದ ಶಮೀರ್, ಯುವತಿಯ ಎಡಕೈ ಹಾಗೂ ಬಲಕೈ ಮತ್ತು ಕುತ್ತಿಗೆಗೆ ಚೂರಿಯಿಂದ ಇರಿದಿದ್ದಾನೆ. ಈ ವೇಳೆ ಮನೆಯವರು ಶಮೀರ್ ನನ್ನು ಹಿಡಿದಿದ್ದಾರೆ. ತಕ್ಷಣವೇ ಯುವತಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ, ಆರೋಪಿ ಶಮೀರ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.