ಮಂಗಳಮುಖಿ, ವಿಶೇಷ ಚೇತನರಿಂದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ರಾಜ್ಯಪಾಲರಿಂದ ಚಾಲನೆ
ಬೆಂಗಳೂರು: ಮತದಾನದ ಪ್ರಮಾಣವನ್ನು ಉತ್ತೇಜಿಸುವ ಹಾಗೂ ಸಮಾಜದ ವಿವಿಧ ವರ್ಗಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಸಲುವಾಗಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ, ಬೆಂಗಳೂರು ನಗರ ಜಿಲ್ಲಾಡಳಿತ ಮತ್ತು ಬಿಬಿಎಂಪಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಿಶೇಷ ಚೇತನರು, ತೃತೀಯಲಿಂಗಿಗಳಿಂದ ಮತದಾನದ ಜಾಗೃತಿಯ ವಿಶೇಷ ರ್ಯಾಲಿಗೆ ಗುರುವಾರ ರಾಜಭವನದ ಆವರಣದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗೌರವಾನ್ವಿತ ರಾಜ್ಯಪಾಲರು, ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಚುನಾವಣೆ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು, ಮತ ಚಲಾವಣೆ ಹಕ್ಕನ್ನು ಪಡೆದಿರುವ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ವಿಶ್ವದಲ್ಲಿ ನಮ್ಮ ದೇಶ ದೊಡ್ಡ ಪ್ರಜಾಪ್ರಭುತ್ವದ ದೇಶವಾಗಿ ಹೊರಹೊಮ್ಮಿದೆ. ನಮ್ಮ ದೇಶದ ಸಂವಿಧಾನದ ಪ್ರಕಾರ ಸರ್ಕಾರವನ್ನು ಆಯ್ಕೆ ಮಾಡುವ ಚುನಾವಣೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಮತ ಚಲಾವಣೆಯ ಹಕ್ಕನ್ನು ನೀಡಲಾಗಿದೆ. ಮತದಾನ ಎಂಬುದು ನಮ್ಮ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಸಂವಿಧಾನಾತ್ಮಕವಾಗಿ ದೊರೆತ ಹಕ್ಕಾಗಿದೆ. ಪ್ರತಿಯೊಬ್ಬ ಅರ್ಹ ಮತದಾರರು ಮತ ಚಲಾವಣೆ ಮಾಡುವ ಮೂಲಕ ತಮ್ಮ ಕರ್ತವ್ಯ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗ ದೇಶದ ಯಾವುದೇ ಅರ್ಹ ಮತದಾರ ಮತದಾನದಿಂದ ವಂಚಿತರಾಗದಂತೆ ಜಾಗೃತಿ ಮೂಡಿಸುತ್ತಿದೆ. ದಿವ್ಯಾಂಗರೂ ಸಹ ಮತದಾನ ಮಾಡುವಂತೆ ಉತ್ತೇಜಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮುಂಬರುವ ಚುನಾವಣೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರ ಮತ ಚಲಾವಣೆ ಮಾಡುವ ಕುರಿತು ಆಯೋಜಿಸಲಾಗಿರುವ ಈ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಭಾರತ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರಾದ ಅಜಯ್ ಭಾಡೂ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಬೆಂಗಳೂರು ನಗರ ಜಿಲ್ಲಾಪಂಚಾಯತ್ ಸಿಇಓ ಸಂಗಪ್ಪ, ಉಪಕಾರ್ಯದರ್ಶಿ ನೋಮೇಶ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw