ಮಂಗಳೂರಿನ ಎಲ್ಲ ಸಿಟಿ ಬಸ್ ಗಳಲ್ಲಿ “ಅಂಬೇಡ್ಕರ್ ವೃತ್ತ” ಸ್ಟಿಕರ್ ಅಂಟಿಸಿದ ಪೊಲೀಸರು - Mahanayaka

ಮಂಗಳೂರಿನ ಎಲ್ಲ ಸಿಟಿ ಬಸ್ ಗಳಲ್ಲಿ “ಅಂಬೇಡ್ಕರ್ ವೃತ್ತ” ಸ್ಟಿಕರ್ ಅಂಟಿಸಿದ ಪೊಲೀಸರು

ambedkar
18/03/2021

ಮಂಗಳೂರು: ಮಂಗಳೂರು ಸಿಟಿ ಬಸ್ ಗಳಲ್ಲಿ ಅಂಬೇಡ್ಕರ್ ವೃತ್ತವನ್ನು ಎಲ್ಲ ಬಸ್ ಗಳಲ್ಲಿಯೂ ಜ್ಯೋತಿ ಸರ್ಕಲ್ ಎಂದು ಬರೆಯಲಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ಟ್ರಾಫಿಕ್‌ ಪೊಲೀಸ್‌‌, ಆರ್‌ ಟಿಓ ಅಧಿಕಾರಿಗಳ ನಿರ್ದೇಶನದಂತೆ ನಗರದ ಎಲ್ಲಾ ಖಾಸಗಿ ಬಸ್‌ ಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಸ್ಟಿಕ್ಕರ್ ಅಂಟಿಸಲಾಗಿದೆ.

ಡಿಸಿಪಿ ಹರಿರಾಂ ಶಂಕರ್‌ ನೇತೃತ್ವದಲ್ಲಿ ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಎಸ್‌ಸಿ, ಎಸ್‌ಟಿ ಸಮುದಾಯದ ಕುಂದುಕೊರತೆಗಳ ಸಭೆಯಲ್ಲಿ ಈ ವಿಚಾರದ ಬಗ್ಗೆ ದೂರು ಕೇಳಿ ಬಂದಿತ್ತು.


ADS

ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಡಿಸಿಪಿ, ಇದನ್ನು ಮುಂದಿನ ಕುಂದುಕೊರತೆ ಸಭೆಯೊಳಗೆ ಸರಿಪಡಿಸಲಾಗುತ್ತದೆ ಎಂದು ಹೇಳಿದ್ದರು. ಇದೀಗ ಮಂಗಳೂರು ನಗರ ಸಂಚಾರ ಪೊಲೀಸ್‌, ಖಾಸಗಿ ಬಸ್‌ ಅಸೋಸಿಯೇಶನ್‌‌‌, ಆರ್‌ ಟಿಓ ಹಾಗೂ ಡಿಎಸ್‌ ಎಸ್‌‌ ಸೇರಿದಂತೆ ಎಸ್‌ ಸಿ. ಎಸ್‌‌ ಟಿ ಸಂಘಟನೆಗಳ ಜಂಟಿ ಪ್ರಯತ್ನದಿಂದ ನಗರದ ಎಲ್ಲಾ ಬಸ್‌ ಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಸ್ಟಿಕ್ಕರ್‌ ಗಳನ್ನು ಅಳವಡಿಸಲಾಗಿದೆ.

ಮಂಗಳೂರಿನ ಹೃದಯ ಭಾಗವಾಗಿರುವ ಅಂಬೇಡ್ಕರ್ ಸರ್ಕಲ್ ನ್ನು ಜ್ಯೋತಿ ಸರ್ಕಲ್ ಎಂದು ಕರೆಯಲಾಗುತ್ತಿತ್ತು. ಅಂಬೇಡ್ಕರ್ ವೃತ್ತದ ಸಮೀಪದಲ್ಲಿರುವ ಜ್ಯೋತಿ ಟಾಕೀಸ್ ಹೆಸರನ್ನು ಉಲ್ಲೇಖಿಸಿ ಜ್ಯೋತಿ ಸರ್ಕಲ್ ಎಂದು ಹೇಳಲಾಗುತ್ತಿತ್ತು. ಸಿಟಿ ಬಸ್ ಗಳಲ್ಲಿ ಕೂಡ ಅಂಬೇಡ್ಕರ್ ಸರ್ಕಲ್ ಎಂದು ಬರೆಯುವ ಬದಲು, ಜ್ಯೋತಿ ಸರ್ಕಲ್ ಎಂದೇ ಬರೆಯಲಾಗಿತ್ತು. ಇಡೀ ದೇಶಕ್ಕೆ ಸಂವಿಧಾನವನ್ನು ನೀಡಿದ ಅಂಬೇಡ್ಕರರ ಹೆಸರು ಬಸ್ ನಲ್ಲಿ ಹಾಕಲು ಅಷ್ಟೇನು ಮಡಿವಂತಿಕೆ ಎಂಬ ಆಕ್ರೋಶಗಳು ಬಹಳಷ್ಟು ವರ್ಷಗಳಿಂದ ಕೇಳಿ ಬರುತ್ತಿತ್ತು. ಇದೀಗ ಮಂಗಳೂರಿನ ಅಂಬೇಡ್ಕರ್ ವಾದಿಗಳು, ದಲಿತ ಸಂಘಟನೆಗಳ ಪ್ರಯತ್ನದಿಂದಾಗಿ ಅಂಬೇಡ್ಕರ್ ವೃತ್ತದ ಘನತೆಯನ್ನು ಜಿಲ್ಲಾಡಳಿತ ಎತ್ತಿ ಹಿಡಿದಿದೆ.

ಇತ್ತೀಚಿನ ಸುದ್ದಿ