ಮಂಗಳೂರಿನಲ್ಲಿ ಮತ್ತೊಂದು ಹತ್ಯೆ ಸಿಎಂ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ: ಸಿದ್ದರಾಮಯ್ಯ ತರಾಟೆ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲಾಗದ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು, ಸುಳ್ಯದಲ್ಲಿ ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿರುವ ಬೆನ್ನಲ್ಲಿಯೇ ಇಂದು ಸುರತ್ಕಲ್ ನಲ್ಲಿ ಫಾಝೀಲ್ ಎಂಬ ಯುವಕನ ಕೊಲೆ ನಡೆದಿರುವುದು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿರುವುದಕ್ಕೆ ಸಾಕ್ಷಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಸರ್ಕಾರವನ್ನು ತರಾಟೆಗೆತ್ತಿಕೊಂಡಿರುವ ಅವರು, ದಕ್ಷಿಣ ಕನ್ನಡದ ಸರಣಿ ಹತ್ಯೆಗಳನ್ನು ಖಂಡಿಸದೆ, ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಅಟ್ಟದೆ, ಅವರ ದುಷ್ಕೃತ್ಯವನ್ನು ಕ್ರಿಯೆಗೆ-ಪ್ರತಿಕ್ರಿಯೆ ಎಂಬ ಸಮರ್ಥನೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇದಕ್ಕೆ ಹೊಣೆಗಾರರು ಎಂದಿದ್ದಾರೆ.
ಸಿಎಂ ಜಿಲ್ಲೆಯಲ್ಲಿರುವಾಗಲೇ ಇಂತಹ ಘಟನೆ ನಡೆದಿರುವುದು ಅವರ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ. ಅಸಮರ್ಥ ಗೃಹಸಚಿವರಿಗೆ ಪೊಲೀಸ್ ಇಲಾಖೆಯ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಇದರಿಂದಾಗಿ ದುಷ್ಕರ್ಮಿಗಳು ರಾಜಾರೋಷವಾಗಿ ಹತ್ಯಾಕಾಂಡವನ್ನು ಮುಂದುವರಿಸಿದ್ದಾರೆ ಎಂದು ಅವರು ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.
ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಬೇಕು. ಆದರೆ ರಾಜ್ಯ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಮತ್ತು ಜನಾಕ್ರೋಶವನ್ನು ಶಾಂತಗೊಳಿಸಲು ತನಿಖೆಯ ನೆಪದಲ್ಲಿ ಆರೋಪಿಗಳ ಹೊರತಾಗಿ ಅಮಾಯಕರಿಗೂ ಕಿರುಕುಳ ನೀಡುವುದು ಸಲ್ಲದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka