ಲಂಚ ಸ್ವೀಕರಿಸಿದ ಆರೋಪದಡಿಯಲ್ಲಿ ಬಂಧಿತ ತಹಶೀಲ್ದಾರ್ ಮತ್ತು ಸಹಾಯಕನಿಗೆ ಜಾಮೀನು ನಿರಾಕರಣೆ
ಮಂಗಳೂರು: ಲಂಚ ಸ್ವೀಕರಿಸಿದ ಆರೋಪದಡಿಯಲ್ಲಿ ಬಂಧಿತರಾಗಿರೋ ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಸಹಾಯಕನಿಗೆ ಜಾಮೀನು ನಿರಾಕರಿಸಿದ ಮಂಗಳೂರು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ನಡೆಸಿದ ಕಾರ್ಯಾಚಣೆಯಲ್ಲಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಸಹಾಯಕ ಶಿವಾನಂದ ನಾಟೇಕರ್ ಎಂಬುವವರನ್ನು ಬಂಧಿಸಲಾಗಿತ್ತು.
ಮಿನಿ ವಿಧಾನ ಸೌಧದ ತಾಲೂಕು ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ತಹಶೀಲ್ದಾರ್ ಸಹಾಯಕ ಶಿವಾನಂದ ನಾಟೇಕರ್ ಎಂಬಾತನನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದರು.
ಲೋಕಾಯುಕ್ತ ಅಧಿಕಾರಿಗಳ ವಿಚಾರಣೆಯ ವೇಳೆ ಲಂಚದ ಹಣವನ್ನು ತಹಶೀಲ್ದಾರ್ ಪರವಾಗಿ ತಾನು ಪಡೆದಿದ್ದು ಎಂದು ಶಿವಾನಂದ ತಿಳಿಸಿದ್ದ ಕಾರಣ ಅವರನ್ನು ಕೂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಮೂಲತಃ ವಿಜಯಪುರ ನಿವಾಸಿ ಶಿವಾನಂದ ನಾಟೇಕರ್ ಮಿನಿ ವಿಧಾನಸೌಧದಲ್ಲಿ ಪ್ರಥಮ ದರ್ಜೆ ನೌಕರನಾಗಿದ್ದ. 73 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಕಾವೂರಿನಲ್ಲಿರುವ ತಮ್ಮ ಜಾಗವನ್ನು ಮಾರಾಟ ಮಾಡಲು ಎನ್‌ಒಸಿ ಪಡೆಯಲು ಬಂದಿದ್ದ ಸಂದರ್ಭ ಆರೋಪಿ ಶಿವಾನಂದ್ 2 ಸಾವಿರ ಲಂಚ ಪಡೆದು ಬಳಿಕ ಹೆಚ್ಚುವರಿ 10 ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದ. ಆದರೂ ಹಿರಿಯ ನಾಗರಿಕರು ವಿನಂತಿ ಮಾಡಿದಾಗ 5 ಸಾವಿರ ರೂಪಾಯಿಗೆ ಒಪ್ಪಿಗೆ ಸೂಚಿಸಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಅರ್ಜಿದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ಆರಂಭಿಸಿದ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ಶಿವಾನಂದ ಲಂಚ ಸ್ವೀಕರಿಸುತ್ತಿದ್ದಾಗ ವಶಕ್ಕೆ ಪಡೆದಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka