ಮಂಗಳೂರಿನ ಉದ್ಯಮಿ ಶಿರಸಿಯಲ್ಲಿ ಬರ್ಬರ ಹತ್ಯೆ

ಮಂಗಳೂರು: ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ನಿವಾಸಿಯೊಬ್ಬರನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮುಂಡಗೋಡದಲ್ಲಿ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ನಡೆದಿದೆ.
36 ವರ್ಷ ವಯಸ್ಸಿನ ಸುದರ್ಶನ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಇಲ್ಲಿನ ಬಡ್ಡಿಗೇರಿಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಮುಂಡಗೋಡ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಹತ್ಯೆ ಯಾವ ಕಾರಣಕ್ಕಾಗಿ ನಡೆದಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ತೋಟತ್ತಾಡಿ ಗ್ರಾಮದ ಬೆಂದ್ರಾಳ ನಿವಾಸಿ ರಿಯಲ್ ಎಸ್ಟೇಟ್ ಹಾಗೂ ಪ್ಲೈವುಡ್ ವ್ಯವಹಾರ ನಡೆಸುತ್ತಿದ್ದ ಪುರುಷೋತ್ತಮನ್ ಎಂಬವರ ಪುತ್ರನಾಗಿರುವ ಸುದರ್ಶನ್ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ವಿವಾಹಿತರಾಗಿದ್ದ ಸುದರ್ಶನ್ ಅವರಿಗೆ ಒಂದು ಮಗು ಕೂಡ ಇದೆ. ಮೂರು ವರ್ಷಗಳ ಹಿಂದೆ ಅವರು ಧಾರವಾಡದಲ್ಲಿ ವಾಸವಿದ್ದರು. ಮಂಗಳೂರು, ಶಿರಸಿ ಸೇರಿದಂತೆ ಹಲವೆಡೆಗಳಲ್ಲಿ ಇವರಿಗೆ ವ್ಯವಹಾರಗಳಿದ್ದವು ಎಂದು ತಿಳಿದು ಬಂದಿದೆ.