ತಂಗಿ ಮತ್ತು ಆಕೆಯ ಮಗನನ್ನು ಕೊಂದ ವೈದ್ಯ ದಂಪತಿಯನ್ನು ನಡುರಸ್ತೆಯಲ್ಲಿ ಮುಗಿಸಿದ ಅಣ್ಣ! - Mahanayaka
6:22 AM Thursday 12 - December 2024

ತಂಗಿ ಮತ್ತು ಆಕೆಯ ಮಗನನ್ನು ಕೊಂದ ವೈದ್ಯ ದಂಪತಿಯನ್ನು ನಡುರಸ್ತೆಯಲ್ಲಿ ಮುಗಿಸಿದ ಅಣ್ಣ!

rajasthan
29/05/2021

ಜೈಪುರ: ಕಾರಿನ್ನು ನಡು ರಸ್ತೆಯಲ್ಲಿಯೇ ಅಡ್ಡಗಟ್ಟಿ ವೈದ್ಯ ದಂಪತಿಯನ್ನು ಇಬ್ಬರು ಯುವಕರು ನಡು ರಸ್ತೆಯಲ್ಲೇ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಶ್ರೀರಾಮ್ ಆಸ್ಪತ್ರೆಯ ನಿರ್ದೇಶಕ ಡಾ.ಸುದೀಪ್ ಗುಪ್ತಾ ಹಾಗೂ ಆತನ ಪತ್ನಿ ಡಾ.ಸೀಮಾ ಗುಪ್ತಾ ತಮ್ಮ ಕಾರಿನಲ್ಲಿ ಹಿರಾಡಾಸ್ ಕಡೆಗೆ ಶುಕ್ರವಾರ ಸಂಜೆ 4:30ಕ್ಕೆ ಕಾಳಿ ಬಾಗ್ಚಿ ಪ್ರದೇಶದಲ್ಲಿ ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ನಡು ರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ ಐದು ಬಾರಿ ಗುಂಡು ಹಾರಿಸಿ ದಂಪತಿಯನ್ನು ಹತ್ಯೆ ಮಾಡಿದ್ದರು.

ಇದೀಗ ಆರೋಪಿಗಳನ್ನು ಪೊಲೀಸರು 24 ಗಂಟೆಯೊಳಗೆ ಪತ್ತೆ ಮಾಡಿದ್ದು, ಆರೋಪಿಗಳ ಪತ್ತೆಯ ಹಿಂದೆಯೇ ಕರುಣಾಜನಕ ಕಥೆಯೊಂದು ಬಯಲಾಗಿದೆ. ಹತ್ಯೆಗೀಡಾಗಿದ್ದ ವೈದ್ಯ ದಂಪತಿ ತಮ್ಮ ಸುಖ ಸಂಸಾರಕ್ಕಾಗಿ ಮಹಿಳೆ ಹಾಗೂ ಆಕೆಯ ಪುಟ್ಟ ಮಗುವನ್ನು ಸುಟ್ಟು ಭಸ್ಮ ಮಾಡಿದ್ದು, ಇದೀಗ ಈ ಸೇಡನ್ನು ಮಹಿಳೆಯ ಅಣ್ಣ ತೀರಿಸಿದ್ದು, ನಡುರಸ್ತೆಯಲ್ಲಿ ದಂಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ.

ಡಾ.ಸುದೀಪ್ ಒಬ್ಬ ಸ್ತ್ರೀಲೋಲನಾಗಿದ್ದು, ಆತನಿಗೆ ತನ್ನ ಕ್ಲಿನಿಕ್ ನಲ್ಲಿರುವ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಪತ್ನಿ ಸೀಮಾಗೆ ಅನುಮಾನ ಇತ್ತು. ಆ ಮಹಿಳೆ ಸೂರ್ಯ ನಗರದ ಪೊಶ್ ನಗರದಲ್ಲಿ ವಾಸವಿದ್ದು, ಆಕೆಗೆ 6 ವರ್ಷದ ಮಗ ಕೂಡ ಇದ್ದ.  2019ರಲ್ಲಿ ಡಾ.ಸೀಮಾ ತನ್ನ ಅತ್ತೆಯ ಜೊತೆಗೆ ಮಹಿಳೆಯ ಮನೆಗೆ ಹೋಗಿದ್ದು, ಮನೆಯ ಹೊರಗಿನಿಂದ ಬೀಗ ಹಾಕಿ ಮನೆಗೆ ಬೆಂಕಿ ಹಚ್ಚಿದ್ದರು. ಮನೆಯೊಳಗಿದ್ದ ಮಹಿಳೆ ಹಾಗೂ ಆಕೆಯ ಪುತ್ರ ಬೆಂಕಿಯಲ್ಲಿ ದಹಿಸಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಸುದೀಪ್ ಹಾಗೂ ಡಾ.ಸೀಮಾ ಜೈಲು ಪಾಲಾಗಿದ್ದರು.  ಮೊದಲಿಗೆ ಈ ಕೃತ್ಯದಲ್ಲಿ ಕೇವಲ ಸೀಮಾಳ ಪಾತ್ರ ಇದೆ ಎಂದು ಮಾತ್ರವೇ ಅನುಮಾನ ಇತ್ತು. ಆದರೆ ಆ ಬಳಿಕ ಡಾ.ಸುದೀಪ್ ಕೂಡ ಈ ಪ್ಲಾನ್ ನಲ್ಲಿ ಸೇರಿದ್ದ ಎಂದು ತಿಳಿದು ಬಂದಿತ್ತು.

ಜೈಲಿನಿಂದ ಹೊರ ಬಂಧ ಬಳಿಕ ಈ ಪ್ರಕರಣ ಇಲ್ಲಿಗೆ ಮುಕ್ತಾಯವಾಯಿತು ಎಂದು ನೆಮ್ಮದಿಯಲ್ಲಿ ವೈದ್ಯ ದಂಪತಿ ತಿರುಗಾಡುತ್ತಿದ್ದರು. ಆದರೆ ಇತ್ತ ತನ್ನ ತಂಗಿ ಹಾಗೂ ಆಕೆಯ ಪುಟ್ಟ ಮಗನನ್ನು ಸುಟ್ಟುಕೊಂದಿದ್ದ ಪಾಪಿಗಳಿಗಾಗಿ ಆಕೆಯ ಸಹೋದರ ಅನೂಜ್ ಹೊಂಚು ಹಾಕುತ್ತಿದ್ದ. ಹಲವು ದಿನಗಳಿಂದಲೂ ದಂಪತಿಯ ಹಿಂದೆ ಬಿದ್ದಿದ್ದ ಅನೂಜ್ ಅವರ ಚಲನವಲನಗಳನ್ನುಗಮನಿಸುತ್ತಿದ್ದ.

ಅಂತೂ ಆ ಶುಕ್ರವಾರ ಬಂದೇ ಬಿಟ್ಟಿದ್ದು, ಮಟಮಟ ಮಧ್ಯಾಹ್ನದ ವೇಳೆಗೆ ತನ್ನ ಸ್ನೇಹಿತ ಮಹೇಶ್ ನೊಂದಿಗೆ ರಿವಾಲ್ವಾರ್ ನೊಂದಿಗೆ ಬಂದ ಅನೂಜ್ ರಾಜಸ್ತಾನದ ಭಾರತ್ ಪುರ ಬಳಿ ಕಾರನ್ನು ಅಡ್ಡ ಹಾಕಿದ್ದಾನೆ. ಕಾರನ್ನು ಅಡ್ಡ ಹಾಕಿದವನೇ ನೇರವಾಗಿ ಪಿಸ್ತೂಲ್ ತೆಗೆದು ಡಾ.ಸುದೀಪ್ ನ ತಲೆಗೆ ಗುಂಡಿಟ್ಟಿದ್ದಾನೆ. ಆತನ ಪತ್ನಿ ಸೀಮಾಳ ಎದೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಒಟ್ಟು ಐದು ಬಾರಿ ಗುಂಡು ಹಾರಿಸಿದರೂ ಅನೂಜ್ ನ ಆಕ್ರೋಶ ತೀರಿರಲಿಲ್ಲ. ದಂಪತಿಯ ರಕ್ಷಣೆಗೆ ಅಲ್ಲಿ ನೆರೆದಿದ್ದ ಕೆಲವರು ಕಾರಿನ ಸಮೀಪ ಬರಲು ನೋಡುತ್ತಿದ್ದ ವೇಳೆ ಅನೂಜ್ ಅವರಿಗೂ ಪಿಸ್ತೂಲ್ ತೋರಿಸಿ ಸ್ಥಳದಿಂದ ಹೋಗುವಂತೆ ಹೇಳಿದ್ದಾನೆ.

ಇದೀಗ ಹತ್ಯೆ ಆರೋಪಿಗಳ ಗುರುತು ಪತ್ತೆ ಮಾಡಿರುವ ಪೊಲೀಸರು, ಆರೋಪಿಗಳ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಮುಂದಿನ ತನಿಖೆಯಲ್ಲಿ ಪ್ರಕರಣದ ಸತ್ಯಾಸತ್ಯತೆಗಳು ಬಯಲಾಗಲಿದೆ.

ಇತ್ತೀಚಿನ ಸುದ್ದಿ