ಮಂಗಳೂರು ವಿವಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ:  ಕ್ಯಾಂಪಸ್ ಫ್ರಂಟ್ - Mahanayaka
7:27 PM Thursday 12 - December 2024

ಮಂಗಳೂರು ವಿವಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ:  ಕ್ಯಾಂಪಸ್ ಫ್ರಂಟ್

cfi
05/01/2022

ಮಂಗಳೂರು: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ಮಂಗಳೂರು ವಿಶ್ವವಿದ್ಯಾಲಯವು ದಿನ ಕಳೆದಂತೆ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದ್ದು, ಹಲವಾರು ಸಮಸ್ಯೆಗಳ ಆಗರವಾಗಿ ಪರಿಣಮಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆರೋಪಿಸಿದೆ.

ಮಂಗಳೂರು ಪತ್ರಕರ್ತರ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಸಂಘಟನೆಯ ಮುಖಂಡರು, ದೇಶ, ವಿದೇಶಗಳಿಂದ ಹಲವಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಮಂಗಳೂರು ವಿಶ್ವವಿದ್ಯಾಲಯದ ಅವ್ಯವಸ್ಥೆಗಳ ಬಗ್ಗೆ ರಾಜ್ಯಪಾಲರು ಕುಲಪತಿಗಳ ಸಭೆಯಲ್ಲಿ ಪ್ರಶ್ನಿಸಿ ಸಮಸ್ಯೆಯನ್ನು ಸರಿಪಡಿಸಲು ಸೂಚಿಸಿದ ಘಟನೆ ನಡೆದಿದೆ. ಇವುಗಳಿಗೆಲ್ಲ ಯಾವುದೇ ರೀತಿಯ ಅಭಿವೃದ್ಧಿ ಬಗ್ಗೆ ಗಮನ ಹರಿಸದ ಸಿಂಡಿಕೇಟ್ ಸದಸ್ಯರು ಮತ್ತು ಕುಲಪತಿ ಇದಕ್ಕೆ ನೇರ ಹೊಣೆಯಾಗಿದ್ದಾರೆ ಎಂದರು.

ಅವ್ಯವಹಾರ ಮತ್ತು ಭ್ರಷ್ಟಾಚಾರ ಆರೋಪಗಳು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ಸರ್ಕಾರ ಇದರ ಬಗ್ಗೆ ಸರಿಯಾದ ತನಿಖೆ ನಡೆಸಲು ಸಮಿತಿ ರಚಿಸಬೇಕು. ಆ ಮೂಲಕ ವಿಶ್ವವಿದ್ಯಾಲಯವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯಲು ಅವರು  ಆಗ್ರಹಿಸಿದರು.

ಲ್ಯಾಪ್ ಟಾಪ್ ಖರೀದಿಯಲ್ಲಿ ಅವ್ಯವಹಾರ:

ಯುಜಿಸಿ ಅನುದಾನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 330 ಲ್ಯಾಪ್‌ ಟಾಪ್ ವಿತರಿಸಲು ಟೆಂಡರ್ ಪ್ರಕ್ರಿಯೆ ನಡೆದಿದ್ದರು. ಆದರೆ ಅದನ್ನು ಬದಿಗೊತ್ತಿ ಕಿಯೋನಿಕ್ಸ್ ಸಂಸ್ಥೆಯಿಂದ ಲ್ಯಾಪ್‌ ಟಾಪ್ ಖರೀದಿಸಲಾಗಿದ್ದು ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಕೇವಲ‌ 62,950 ರೂ ಬೆಲೆಯ ಲ್ಯಾಪ್‌ ಟಾಪ್ ಅನ್ನು ಕಿಯೋನಿಕ್ಸ್ ಸಂಸ್ಥೆಯಿಂದ 99,750 ರೂ. ಕೊಟ್ಟು ಖರೀದಿಸಿರುವುದು ಅಕ್ರಮವಾಗಿದ್ದು, ಒಂದು ಬಾರಿ ಸಿಂಡಿಕೇಟ್ ನಿರ್ಣಯ ಪಡೆದು ಕನಿಷ್ಠ ದರ ಪಟ್ಟಿ ಅಂಗೀಕರಿಸಿ, ಬಳಿಕ‌ ಏಕಾಏಕಿ ಸಿಂಡಿಕೇಟ್ ಸಮಿತಿಯ ಗಮನಕ್ಕೇ ಬಾರದೆ ಟೆಂಡರ್ ರದ್ದುಗೊಳಿಸಿ ಹಿಂಬಾಗಿಲಿನ ಮೂಲಕ ಅವ್ಯವಹಾರ ನಡೆಸಿದ್ದು, ಇದನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪದವಿ ಪರೀಕ್ಷಾ ಫಲಿತಾಂಶ ಗೊಂದಲ

ಪದವಿ ಪರೀಕ್ಷೆಗಳು ನಡೆದು ತಿಂಗಳುಗಳು ಕಳೆದಿದ್ದರೂ,  ಫಲಿತಾಂಶ ಗೊಂದಲಗಳು ಇನ್ನೂ ಬಗೆಹರಿದಿಲ್ಲ. ವೆಬ್‌ ಸೈಟ್ ನಲ್ಲಿ ಪ್ರಕಟವಾದ ಫಲಿತಾಂಶವು ದೋಷಪೂರಿತವಾಗಿದೆ ಮತ್ತು ಕೆಲವೊಂದು ವಿಷಯದ ಅಂಕದ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ತೋರಿಸುತ್ತಿದೆ. ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ‌ ಬರುವ ಪದವಿ‌ ಕಾಲೇಜುಗಳ ವಿದ್ಯಾರ್ಥಿಗಳು ಹಣವನ್ನು ಖರ್ಚುಮಾಡಿಕೊಂಡು ದಿನನಿತ್ಯ ಕಾಲೇಜು-ವಿಶ್ವವಿದ್ಯಾಲಯ ಅಲೆದಾಡುತ್ತಿದ್ದಾರೆ. ಪದವಿ ಮುಗಿಸಿ ಉದ್ಯೋಗಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋಗಲು ಪರದಾಡುತ್ತಿದ್ದಾರೆ. ಆದರೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಇದನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಅಸಡ್ಡೆಯ ಉತ್ತರವನ್ನು ನೀಡುತ್ತಿದ್ದಾರೆ. ಇದು ಮಂಗಳೂರು ವಿವಿ ಇತಿಹಾಸದಲ್ಲಿಯೇ ಕಪ್ಪುಚುಕ್ಕೆಯಾಗಿದೆ ಎಂದು ಆರೋಪಿಸಿದರು.

ಇನ್ನೂ ಪ್ರಕಟಗೊಳ್ಳದ ಸ್ನಾತಕೋತ್ತರ ಪರೀಕ್ಷೆ ಫಲಿತಾಂಶ

ದ್ವಿತೀಯ ಸ್ನಾತಕೋತ್ತರ ತರಗತಿಗಳು  ಪ್ರಾರಂಭಗೊಂಡು ತಿಂಗಳು ಕಳೆದರೂ ಪ್ರಥಮ‌ ಹಾಗೂ ದ್ವಿತೀಯ ವರ್ಷದ ಫಲಿತಾಂಶ ಇನ್ನೂ ಪ್ರಕಟಗೊಲ್ಲದೇ ಇರುವುದು  ಮಂಗಳೂರು ವಿವಿಯ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ. ಖಾಸಗಿ ಕಾಲೇಜುಗಳಲ್ಲಿ ಪ್ರಥಮ ಸ್ನಾತಕೋತ್ತರ ತರಗತಿಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಆದರೆ ವಿವಿಯಲ್ಲಿ ಇನ್ನೂ ಪ್ರಾರಂಭಗೊಂಡಿಲ್ಲ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಕೆಲವು ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದುಕೊಂಡರೂ ಮಾರ್ಕ್ ಕಾರ್ಡ್ ಇಲ್ಲದೇ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಪದವಿ ತರಗತಿಗಳಿಗೆ ಇನ್ನೂ ಪ್ರಕಟಗೊಳ್ಳದ ಪಠ್ಯಕ್ರಮ

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎನ್‌ ಇ‌ಪಿ ಆಧಾರಿತ ನಾಲ್ಕು ವರ್ಷಗಳ ಪದವಿ ತರಗತಿಗಳು ಆರಂಭವಾಗಿದ್ದು, ಆದರೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯಕ್ರಮ ಪ್ರಕಟಗೊಳ್ಳದೆ ಇರುವುದು ತರಾತುರಿಯಲ್ಲಿ ಜಾರಿಗೆ ತಂದಿರುವ ಎನ್‌ ಇ‌ಪಿ ಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. NCF ನ ಪ್ರಕಾರ ಪಠ್ಯಕ್ರಮ ಸಂಪೂರ್ಣವಾಗಿ ತಯಾರಾಗಲು ಇನ್ನೂ ಸಮಯಾವಕಾಶದ ಅಗತ್ಯವಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿ ಗೊಂದಲ ನಿರ್ಮಾಣವಾಗಿದೆ.

ಕೊಠಡಿಗಳ ಕೊರತೆ ಎದುರಿಸುತ್ತಿರುವ ಪದವಿ ಕಾಲೇಜು

ವಿವಿಯಲ್ಲಿ ಪದವಿ ತರಗತಿಗಳನ್ನು ನಡೆಸಲು ಕೊಠಡಿಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಎನ್ ಇಪಿ ಯನ್ನು ಬಹಳ ಆತುರದಿಂದ ಜಾರಿಗೆ ತರಲಾಗಿದ್ದು, ಆದರೆ ಬೇಕಾದ ಮೂಲಸೌಕರ್ಯವನ್ನು ಒದಗಿಸಲು ವಿವಿಗೆ ಸಾಧ್ಯವಾಗಿಲ್ಲ, ಪದವಿಯ ಕೆಲವೊಂದು ತರಗತಿಗಳು ಯಕ್ಷಗಾನ ಕಲಾಮಂದಿರದಲ್ಲಿ ನಡೆಯುತ್ತಿದೆ. ಮೂಲ ಸೌಕರ್ಯದ ಇಂತಹ ಸಮಸ್ಯೆಗಳನ್ನು ವಿವಿಯು ಶೀಘ್ರ ಬಗೆಹರಿಸಲಿ, ಸರ್ಕಾರವನ್ನು ಮೆಚ್ಚಿಸಲು ಎನ್ ಇಪಿಯಂತಹ ಅಸಂವಿಧಾನಿಕ ನೀತಿಗಳ ಜಾರಿ ಮಾಡುವ ಮುಖಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾ ಮುಖಂಡ ರಿಯಾಝ್ ಅಂಕತ್ತಡ್ಕ, ಮಂಗಳೂರು ನಗರಾಧ್ಯಕ್ಷ ಸರಫುದ್ದೀನ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ, ವಿವಿ ಮುಖಂಡ ಮುನೀರ್ ಬಜಾಲ್ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸೊಸೆಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ ಮಾವ!

ತಂದೆಯ ಕತ್ತು ಸೀಳಿ ಹತ್ಯೆ ಮಾಡಿದ ಪಾಪಿ ಮಗ!

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ: ಯಾವ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ? | ಏನೇನು ನಿರ್ಬಂಧಗಳಿವೆ?

ಪ್ರೀತಿಸಿ ವಂಚನೆ: ಕನಕಗಿರಿ ಶಾಸಕರ ವಿರುದ್ಧ ಗಂಭೀರ ಆರೋಪ!

ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ: ಬೆಚ್ಚಿ ಬೀಳಿಸುತ್ತೆ ವಿಡಿಯೋ

 

ಇತ್ತೀಚಿನ ಸುದ್ದಿ