ಮ್ಯಾನ್ ಹೋಲ್ ಗೆ ಇಳಿದ ಮೂವರು ಕಾರ್ಮಿಕರ ದಾರುಣ ಸಾವು
ರಾಮನಗರ: ಕಾರ್ಮಿಕರನ್ನು ಮ್ಯಾನ್ ಹೋಲ್ ಗೆ ಇಳಿಸಬಾರದು ಎಂದು ಎಷ್ಟೇ ನಿಯಮಗಳನ್ನು ಹಾಕಿದರೂ ಪದೇ ಪದೇ ಮ್ಯಾನ್ ಹೋಲ್ ಗೆ ಕಾರ್ಮಿಕರನ್ನು ಇಳಿಸಲಾಗುತ್ತಿದೆ. ರಾಮನಗರದ ಟೌನ್ ವ್ಯಾಪ್ತಿಯ ನೇತಾಜಿ ಪಬ್ಲಿಕ್ ಸ್ಕೂಲ್ ಬಳಿ ಮ್ಯಾನ್ ಹೋಲ್ ಕ್ಲೀನ್ ಮಾಡಲು ಇಳಿದಿದ್ದ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಗುತ್ತಿಗೆದಾರ ಹರೀಶ್ ಎಂಬುವವರಿಗೆ ಮ್ಯಾನ್‌ಹೋಲ್ ಕಾಮಗಾರಿಯನ್ನು ವಹಿಸಲಾಗಿತ್ತು. ರಾಮನಗರದ ಎಪಿಎಂಸಿ ಹಿಂಭಾಗದಲ್ಲಿ ಈ ದುರ್ಘಟನೆ ನಡೆದಿದ್ದು, ನಗರಸಭೆಗೆ ಮಾಹಿತಿಯೇ ಕೊಡದೇ ಕಾರ್ಮಿಕರು ಇಳಿದಿದ್ದರು ಎನ್ನಲಾಗಿದೆ. ಆಯತಪ್ಪಿ ಬಿದ್ದ ಒಬ್ಬನನ್ನು ರಕ್ಷಿಸಲು ಮುಂದಾದ ಇಬ್ಬರು ಕಾರ್ಮಿಕರೂ ಸೇರಿ, ಮೂರು ಜನರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಯುಜಿಡಿ ಕೆಲಸ ಮಾಡುತ್ತಿದ್ದ ಹೊರ ಗುತ್ತಿಗೆ ಮೂವರು ಕಾರ್ಮಿಕರು ಮ್ಯಾನ್ಹೋಲ್ನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿರುವುದು ಅತ್ಯಂತ ದುರ್ದೈವದ ಸಂಗತಿ. ಇದಕ್ಕಾಗಿ ತೀವ್ರ ಕಂಬನಿ ಮಿಡಿಯುತ್ತೇನೆ. ಇದೊಂದು ಮನಕಲಕುವ ಸರಣಿ ಸಾವು. ಬೇಜವಾಬ್ದಾರಿತನದಿಂದ ಗುತ್ತಿಗೆ ಕಾರ್ಮಿಕರ ಸಾವಿಗೆ ಕಾರಣನಾದ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಮೃತರ ಕುಟುಂಬಸ್ಥರಿಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸಾಂತ್ವನ ಹೇಳಿದ್ದಾರೆ.