ಜನರ ಬದುಕು ಕಟ್ಟಿಕೊಡುವ ಯೋಜನೆಗಳಿರುವ ಪ್ರಣಾಳಿಕೆ ತಯಾರಾಗಲಿದೆ: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು: ಜನರಿಗಾಗಿ, ಜನರಿಗೋಸ್ಕರ, ಜನರ ಆಶೋತ್ತರಗಳಿಗೆ ತಕ್ಕಂತೆ ಬಿಜೆಪಿಯ ಪ್ರಣಾಳಿಕೆ ತಯಾರಾಗಲಿದೆ. ವಿರೋಧ ಪಕ್ಷಗಳಂತೆ ಜನರ ದಿಕ್ಕು ತಪ್ಪಿಸುವ ಪ್ರಣಾಳಿಕೆ ಮಾಡುವುದಿಲ್ಲ, ಜನರ ಬದುಕು ಕಟ್ಟಿಕೊಡುವ ಯೋಜನೆಗಳಿರುವ ಪ್ರಣಾಳಿಕೆ ತಯಾರಾಗಲಿದೆ ಎಂದು ಬಿಜೆಪಿ ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನದ ಸಂಚಾಲಕರೂ ಆದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬಿಜೆಪಿ ಪ್ರಣಾಳಿಕೆ ಅಭಿಯಾನ ಸಮಿತಿಯ ಮೊದಲ ಸಭೆ ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ನಡೆಯಿತು. ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.
ರಾಜ್ಯ ಬಿಜೆಪಿ ಪ್ರಣಾಳಿಕೆ ತಂಡವನ್ನು ಭೇಟಿಯಾಗಿ, ಜಿಲ್ಲಾವಾರು, ತಾಲೂಕುವಾರು ಯಾರೆಲ್ಲ ತಂಡದಲ್ಲಿರಬೇಕೆಂದು ಚರ್ಚಿಸಲಾಗಿದೆ. ಜನರ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸಿ, ಜನರ ನಾಡಿ ಮಿಡಿತ ಅರಿಯಬೇಕು, ಜನರಿಂದ, ಜನರಿಗೋಸ್ಕರ ಪ್ರಣಾಳಿಕೆ ಇರಬೇಕೆಂದು ಉದ್ದೇಶಿಸಲಾಗಿದೆ. ಸೋಮವಾರ ಪಕ್ಷದ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಎಲ್ಲಾ ಜಿಲ್ಲೆಗಳ 200 ಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಲಿದ್ದಾರೆ. ಇಂದಿನ ಚರ್ಚೆಯಲ್ಲಿ ಉತ್ತಮ ಸಲಹೆ ದೊರೆತಿದ್ದು, ಪ್ರಣಾಳಿಕೆಯ ಶೀರ್ಷಿಕೆಯನ್ನು ಕೂಡ ಇಂದು ಅಥವಾ ನಾಳೆಯೇ ಅಂತಿಮ ಮಾಡಲಿದ್ದೇವೆ ಎಂದು ತಿಳಿಸಿದರು.
ಮಹಿಳೆಯರು, ಯುವಜನರು, ವೃದ್ಧರು, ಅಂಗವಿಕಲರು ಮೊದಲಾದ ಜನವರ್ಗಗಳಿಗೆ ನೀಡಲಿರುವ ಕಾರ್ಯಕ್ರಮಗಳ ಕುರಿತು ನಿರ್ಧಾರವಾಗಲಿದೆ. ಕೋವಿಡ್ ಸಾಂಕ್ರಾಮಿಕ ಹಾಗೂ ಎರಡು ಬಾರಿ ಅತಿವೃಷ್ಟಿಯನ್ನು ಬಿಜೆಪಿ ಸರ್ಕಾರ ಸಮರ್ಥವಾಗಿ ಎದುರಿಸಿದೆ. ಕೋವಿಡ್ ನಂತರದ ಐದು ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿರುವಾಗ ಯಾವೆಲ್ಲ ಭರವಸೆ ಈಡೇರಿಸಬಹುದು ಎಂಬುದು ಪ್ರಣಾಳಿಕೆಯಲ್ಲಿ ಬರಲಿದೆ. ಬಿಜೆಪಿ ಕೊಡುವ ಭರವಸೆ ನೈಜತೆಯಿಂದ ಕೂಡಿರಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೈತ ವಿದ್ಯಾನಿಧಿಯ ಭರವಸೆಯನ್ನು ನೀಡದೆಯೇ, ಆ ಯೋಜನೆ ಜಾರಿ ಮಾಡಿದ್ದಾರೆ. ಭರವಸೆಗಳನ್ನು ಮೀರಿಯೂ ಬಿಜೆಪಿ ಯೋಜನೆಗಳನ್ನು ನೀಡಲಿದೆ. ವಿರೋಧ ಪಕ್ಷಗಳಂತೆ ನಮ್ಮದು ಜನರ ದಿಕ್ಕು ತಪ್ಪಿಸುವ ಪ್ರಣಾಳಿಕೆ ಆಗಿರುವುದಿಲ್ಲ. ಆದರೆ ಜನರ ಬದುಕನ್ನು ಕಟ್ಟಿಕೊಡುವ ಪ್ರಣಾಳಿಕೆ ಆಗಲಿದೆ ಎಂದರು.
ಎಷ್ಟು ಗಂಟೆ ವಿದ್ಯುತ್ ಕೊಟ್ಟಿದ್ದಾರೆ?
ಕಾಂಗ್ರೆಸ್ ನಾಯಕರು ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳುತ್ತಾರೆ. ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಎಷ್ಟು ಗಂಟೆ ನಿರಂತರವಾಗಿ ವಿದ್ಯುತ್ ನೀಡಿದ್ದಾರೆ ಎಂಬುದನ್ನು ರೈತರಿಗೆ ಕೇಳಿದರೆ ಗೊತ್ತಾಗುತ್ತದೆ. ಕಾಂಗ್ರೆಸ್ ನಾಯಕರು ಏನು ಮಾಡಲು ಹೊರಟಿದ್ದಾರೆ, ಸರ್ಕಾರ ಏನಾಗಬಹುದು ಎಂಬುದನ್ನು ಯೋಚಿಸಬೇಕು. ಬಿಜೆಪಿ ರಚನಾತ್ಮಕವಾಗಿ ಆಲೋಚಿಸಿ ಕಾರ್ಯಕ್ರಮ ನೀಡಿ, ಜನರ ಜೀವನ ಗುಣಮಟ್ಟ ಉತ್ತಮಪಡಿಸುತ್ತದೆ ಎಂದು ಸಚಿವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw