ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸುಟ್ಟ ಮನುಸ್ಮೃತಿ ಈಗ ಎಲ್ಲಿದೆ?
ಭಾರತದ ಚರಿತ್ರೆಯಲ್ಲಿಯೇ ಇಂದು ಬಹಳ ಮಹತ್ವದ ದಿನ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾನವ ಸಮಾಜಕ್ಕೆ ಮಾರಕವಾಗಿದ್ದ ಮನುಸ್ಮೃತಿಯನ್ನು ಸುಟ್ಟ ದಿನ ಇಂದು. ಡಿಸೆಂಬರ್ 25, 1927ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟು ಅಸಮಾನತೆಯ ಸಮಾಜವನ್ನು ವಿರೋಧಿಸಿ ಸಮಾನ ಸಮಾಜವನ್ನು ಪ್ರತಿಪಾದಿಸಿದರು.
ಮನುಸ್ಮೃತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು 1927 ಇಸವಿಯಲ್ಲಿ ಸುಟ್ಟರೂ, ಅದು ಸಂಪೂರ್ಣವಾಗಿ ಇನ್ನೂ ನಾಶವಾಗಿಲ್ಲ. ಪುಸ್ತಕ ರೂಪದಲ್ಲಿದ್ದ ಮನುಸ್ಮೃತಿ ನಾಶವಾಗಿ ಅಥವಾ ರೂಪಾಂತರಗೊಂಡಿರಬಹುದು. ಆದರೆ ಜನರ ಮಸ್ತಕ(ಮನಸ್ಸು)ದಲ್ಲಿ ಇನ್ನೂ ಕೂಡ ಈ ಮಾರಕ ವೈರಸ್ ಮನುಸ್ಮೃತಿ ಜೀವಂತವಾಗಿದೆ. ಈಗಲೂ ಈ ಮಾರಕ ವೈರಸ್ ಮನುಸ್ಮೃತಿ ಜನರ ಪ್ರಾಣ ಹಿಂಡುತ್ತಿದೆ. ಅದು ಹೇಗೆ ಎನ್ನುವುದನ್ನು ನಾವು ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟ ಈ ದಿನದಂದು ತಿಳಿದುಕೊಳ್ಳಬೇಕಿದೆ. ಆ ಮೂಲಕ ಮಾರಕ ವೈರಸ್ ಮನುಸ್ಮೃತಿಯನ್ನು ಈ ದೇಶದಿಂದ ಸಂಪೂರ್ಣವಾಗಿ ಹೊರದಬ್ಬಬೇಕಿದೆ.
ಬಹುತೇಕರಲ್ಲಿ ಒಂದು ತಪ್ಪು ತಿಳುವಳಿಕೆ ಇದೆ. ಜಾತಿ ಬೇಧ ಮಾಡುವುದು ಬ್ರಾಹ್ಮಣರು ಮಾತ್ರ ಎಂದು. ಮನುಸ್ಮೃತಿ ರಚಿಸಿರುವುದು ಬ್ರಾಹ್ಮಣರು ನಿಜ. ಆದರೆ, ಆ ಮನುಸ್ಮೃತಿಯಿಂದ ಪ್ರಭಾವಕ್ಕೊಳಗಾಗಿ ಜಾತಿ ಬೇಧವನ್ನು ಪ್ರತಿಯೊಬ್ಬರೂ ಮಾಡುತ್ತಾರೆ. ಎಲ್ಲೋ ನಡೆದ ಪ್ರೇಮ ಪ್ರಕರಣದಲ್ಲಿ ಜಾತಿಗೆ ಹೆದರಿ ಯುವ ಜೋಡಿಯ ಆತ್ಮಹತ್ಯೆ ಮಾಡಿಕೊಂಡರು ಎಂದು ಬೇಸರ ಮಾಡಿಕೊಳ್ಳುವವನು, ಕಣ್ಣೀರು ಹಾಕುವವರು ತಮ್ಮ ಮನೆಯಲ್ಲಿ ತಮ್ಮ ಮಗನೋ, ಮಗಳೋ ಬೇರೆ ಜಾತಿಯ ಯುವಕನನ್ನೋ, ಯುವತಿಯನ್ನೋ ಪ್ರೀತಿಸುವುದನ್ನು ವಿರೋಧಿಸುತ್ತಾನೆ. ಅಂದರೆ, ಆತನ ತಲೆಯೊಳಗೆ ಮನುಸ್ಮೃತಿ ಎನ್ನುವ ಮಾರಕ ವೈರಸ್ ಇನ್ನೂ ಜೀವಂತವಾಗಿದೆ ಎಂದು ಅರ್ಥ.
ಜಾತಿ ಬೇಧ ಎನ್ನುವುದು ಕೇವಲ ದಲಿತರಿಗೆ ಮಾತ್ರವೇ ಸಮಸ್ಯೆ ಎನ್ನುವ ತಪ್ಪು ಭಾವನೆ ಇದೆ. ಬ್ರಾಹ್ಮಣರೊಳಗೂ ಬಹಳಷ್ಟು ಉಪ ಪಂಗಡಗಳಿವೆ, ಅವರೊಳಗೂ ಸಾಕಷ್ಟು ಬೇಧ ಭಾವಗಳಿದೆ. ಅಂದರೆ, ಈ ಮನುಸ್ಮೃತಿ ಎನ್ನುವುದು ಯಾರಲ್ಲೂ ಸಮಾನತೆಯನ್ನು ಮೂಡಿಸಿಲ್ಲ. ಎಲ್ಲರನ್ನೂ ಒಡೆಯುವುದು ಮಾತ್ರವೇ ಮನುಸ್ಮೃತಿಯ ಕೆಲಸವಾಗಿದೆ. ದಲಿತರನ್ನು ಎಲ್ಲರೂ ದೂರವಿಡುತ್ತಾರೆ ಎಂದು ಬಹಳಷ್ಟು ಜನರು ಮಾತನಾಡುತ್ತಾರೆ. ಆದರೆ, ದಲಿತರೊಳಗೆ ಎಷ್ಟು ಜಾತಿಗಳಿವೆ. ಎಸ್ ಸಿ-ಎಸ್ಟಿಗಳ ನಡುವೆಯೂ ಜಾತಿ ತಾರತಮ್ಯ ನಡೆಯುವುದಿಲ್ಲವೇ? ದಲಿತರೊಳಗಿನ ಉಪ ಜಾತಿಗಳಲ್ಲಿಯೂ ಜಾತಿ ಬೇಧಗಳಿವೆ. ಅಂದರೆ, ಮನುಸ್ಮೃತಿ ಎನ್ನುವುದು ಪುಸ್ತಕದಿಂದ ಮರೆಯಾಗಿದ್ದರೂ, ಪ್ರತಿಯೊಬ್ಬರ ತಲೆಯೊಳಗೆ ಇದೆ. ಮನುಸ್ಮೃತಿಯನ್ನು ದಿಟ್ಟತನದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದಾರೆ. ಆದರೆ, ಅದು ಜನರ ಮನಸ್ಸಿನೊಳಗೆ ಹೋಗಿ ಮಾರಕ ವೈರಸ್ ಆಗಿ ಪರಿವರ್ತನೆಗೊಂಡು ಎಲ್ಲರ ಮನೆ-ಮನಗಳನ್ನು ಹಾಳು ಮಾಡುತ್ತಿದೆ.
ಮನುಸ್ಮೃತಿ ಪೀಡಿತ ಮನುಷ್ಯರನ್ನಾಗಲಿ, ಧರ್ಮವನ್ನಾಗಲಿ ಬದಲಿಸುವುದು ಎಂದರೆ ಅದಷ್ಟು ಸುಲಭದ ಕೆಲಸವಲ್ಲ. ಅದೊಂದು ಅಜ್ಞಾನದ ಕೂಪ, ಅದು ಪರಿವರ್ತನೆ ಸಾಧ್ಯವಾಗದಷ್ಟರ ಮಟ್ಟಕ್ಕೆ ಕೆಟ್ಟು ಹೋಗಿದೆ. ಬಹುಶಃ ಈ ಸತ್ಯಾಂಶವನ್ನು ಕಂಡುಕೊಂಡ ಬಾಬಾ ಸಾಹೇಬರು, ಬುದ್ಧರ ಹಾದಿಯನ್ನು ಅನುಸರಿಸಿದ್ದಾರೆ. ಬೌದ್ಧ ಧರ್ಮವನ್ನು ಅನುಸರಿಸಲು ತಮ್ಮ ಅನುಯಾಯಿಗಳಿಗೆ ಹೇಳಿದ್ದಾರೆ. ಬುದ್ಧರಿಂದ ಮಾತ್ರವೇ ಈ ಮನುಸ್ಮೃತಿಯನ್ನು ಎದುರಿಸಬಹುದು ಎನ್ನುವುದನ್ನು ತಿಳಿಸಿದ್ದಾರೆ. ಆದರೆ ಇಂದು ಬಾಬಾ ಸಾಹೇಬರ ಬಗ್ಗೆ, ಬುದ್ಧರ ಬಗ್ಗೆ ಮಾತನಾಡುವ ಬಹಳಷ್ಟು ಜನರು ಇಂದಿಗೂ ಬೌದ್ಧರಾಗಿಲ್ಲ, ಅಂಬೇಡ್ಕರ್ ಅವರು ತೋರಿದ ಬುದ್ಧ ಧರ್ಮವನ್ನು ಸೇರಿಲ್ಲ. ಹಾಗಾಗಿ ಇನ್ನೂ ಅವರು ಆಗಾಗ ಶೋಷಣೆಗೊಳಗಾಗುತ್ತಿದ್ದಾರೆ.ಪರಿವರ್ತನೆಯನ್ನು ನಾವು ಇನ್ನೊಬ್ಬರ ಬಳಿಯಲ್ಲಿ ಬಯಸಬಾರದು. ನಾವು ಬದಲಾದರೆ ಸಮಾಜ ಬದಲಾಗುತ್ತದೆ ಎಂಬ ಸತ್ಯ ತಿಳಿದ ಬಾಬಾ ಸಾಹೇಬರು, ಬುದ್ಧನ ಕಡೆಗೆ ದಾರಿ ತೋರಿದರು. ಆದರೆ ಇಂದಿಗೂ ಬ್ರಾಹ್ಮಣ್ಯಕ್ಕೆ, ಮನುಸ್ಮೃತಿಗೆ ಬೈದುಕೊಂಡು ಅದೇ ಅಜ್ಞಾನದ ಕೂಪದಲ್ಲಿ ದಲಿತರು, ಶೋಷಿತರು, ಅಸ್ಪೃಶ್ಯರಾಗಿ ಬದುಕುತ್ತಿದ್ದಾರೆ.