ಮನೆಯೊಳಗೆ ಮಾರಾಮಾರಿ ನಡೆದ್ರೂ, ಏನು ನಡೆದಿಲ್ಲ ಅಂದ್ರು ಉಸ್ತುವಾರಿ ಸಾಹೇಬ್ರು! | ಇದು ಒಗ್ಗಟ್ಟೋ, ಇಕ್ಕಟ್ಟೋ? - Mahanayaka
11:17 PM Friday 20 - September 2024

ಮನೆಯೊಳಗೆ ಮಾರಾಮಾರಿ ನಡೆದ್ರೂ, ಏನು ನಡೆದಿಲ್ಲ ಅಂದ್ರು ಉಸ್ತುವಾರಿ ಸಾಹೇಬ್ರು! | ಇದು ಒಗ್ಗಟ್ಟೋ, ಇಕ್ಕಟ್ಟೋ?

bjp arun singh
16/06/2021

ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ  ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ನಾಯಕತ್ವ ಬದಲಾವಣೆಯ ಬೀದಿ ಕಚ್ಚಾಟಗಳ ನಡುವೆ ಮೂರು ದಿನಗಳ ರಾಜ್ಯ ಭೇಟಿಗೆ ಆಗಮಿಸಿದ್ದ ಅರುಣ್ ಸಿಂಗ್  ಭಿನ್ನಮತ ಶಮನದ ಬಳಿಕ ಎಲ್ಲರೂ ಒಗ್ಗಟ್ಟಿನಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈ ಒಗ್ಗಟ್ಟು ಎಷ್ಟು ದಿನ ಎನ್ನುವ ಪ್ರಶ್ನೆ ಕೂಡ ಮುಖ್ಯವಾಗಿದೆ.

ಕಳೆದ ಹಲವು ತಿಂಗಳುಗಳಿಂದಲೂ ಬಿಜೆಪಿಯೊಳಗೆ ಸೃಷ್ಟಿಯಾಗಿದ್ದ ವಿರೋಧ ಬಣಗಳ ಹೊಡೆದಾಟ ಬೀದಿಗೆ ಬಂದಿತ್ತು. ಸಿಎಂ ಯಡಿಯೂರಪ್ಪನವರು ಕೂಡ ರಾಜೀನಾಮೆ ಬಗ್ಗೆ ಮಾತನಾಡಿದ್ದರು. ಈ ಹೊಡೆದಾಟಗಳು ತಾರಕಕ್ಕೇರಿದ ಬಳಿಕ ಹೈಕಮಾಂಡ್ ಭೇಟಿಯಾಗಿದೆ.


Provided by

ಇನ್ನೂ ಭಿನ್ನ ಮತದ ಬಗ್ಗೆ ಮಾತನಾಡಿದ ಅರುಣ್ ಸಿಂಗ್,  ಎಲ್ಲಾ ನಮ್ಮ ಪಕ್ಷದ ಕಾರ್ಯಕರ್ತರು, ಸಚಿವರು ಮತ್ತು ಶಾಸಕರು ಒಗ್ಗಟ್ಟಿನಿಂದ ಇದ್ದಾರೆ. ಯಾರ ಮಧ್ಯೆಯೂ ಯಾವುದೇ ಭಿನ್ನಮತವಿಲ್ಲ ಎಂದರು. ಪಕ್ಷದ ಶಾಸಕರು ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಹೇಳಿಕೆ ನೀಡದಂತೆ ಮತ್ತು ಏನಾದರೂ ಸಮಸ್ಯೆಗಳಿದ್ದರೆ ವೈಯಕ್ತಿಕವಾಗಿ ನಾಯಕರ ಬಳಿ ಮಾತನಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನಿಮ್ಮ ಕ್ಷೇತ್ರದಲ್ಲಿ ಜನರ ಒಳಿತಿಗಾಗಿ ಕೆಲಸ ಮಾಡಿ, ಪಕ್ಷದ ಕೆಲಸವನ್ನು ಮುನ್ನಡೆಸಿಕೊಂಡು ಹೋಗಿ ಎಂದು ಅರುಣ್ ಸಿಂಗ್ ಶಾಸಕರಿಗೆ ಹೇಳಿದ್ದಾರೆ. ಉತ್ತಮ ಕೆಲಸಗಳು ರಾಜ್ಯದಲ್ಲಿ ಯಡಿಯೂರಪ್ಪನವರ ನಾಯಕತ್ವದಡಿಯಲ್ಲಿಯೇ ಸಾಗಲಿದೆ ಎಂದು ಮತ್ತೊಮ್ಮೆ ಒತ್ತಿ ಹೇಳಿದರು.

ನಾಯಕತ್ವ ಬದಲಾವಣೆಯ ವಿಚಾರ ಬೀದಿ ಜಗಳವಾಗಿ ಮಾರ್ಪಟ್ಟರೂ ಅರುಣ್ ಸಿಂಗ್ ಅವರು , ಇದು ಹೈಕಮಾಂಡ್ ಮಾತ್ರವೇ ತಿಳಿದ ವಿಚಾರ, ಹೊರಗಡೆ ಯಾರಿಗೂ ಗೊತ್ತಿಲ್ಲದ ವಿಚಾರ ಎಂಬಂತೆ ಮಾತನಾಡಿದರು. ಆದರೆ ರಾಜ್ಯ ಬಿಜೆಪಿಯ ಹೊರ ಜಗಳವನ್ನು ಇಡೀ ರಾಜ್ಯ ಕಂಡದ್ದಾಗಿದೆ. ಯತ್ನಾಳ್, ಈಶ್ವರಪ್ಪ ಸೇರಿದಂತೆ ಹಲವು ಬಿಜೆಪಿ ಶಾಸಕರು, ಸಚಿವರು ಸಿಎಂ ಯಡಿಯೂರಪ್ಪ ವಿರುದ್ಧ ಬೀದಿಗಿಳಿದು ಮಾತನಾಡಿದ್ದಾರೆ. ಟೀಕಿಸಿದ್ದಾರೆ. ಯತ್ನಾಳ್ ಅಂತೂ ವೈಯಕ್ತಕ ದಾಳಿ ನಡೆಸಿದ್ದರು. ಸಿ.ಪಿ.ಯೋಗೇಶ್ವರ್ ಅವರು ಕೂಡ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ನಾಯಕತ್ವ ಬದಲಾವಣೆ ಎನ್ನುವ ಚರ್ಚೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ. ಹೀಗಾಗಿಯೇ ಯತ್ನಾಳ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸಿಎಂ ವಿರುದ್ಧ ಧೈರ್ಯವಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಇದೀಗ ಯಡಿಯೂರಪ್ಪ ಅವರನ್ನು ಪಕ್ಷದಿಂದ ಕೆಳಗಿಳಿಸಿದರೆ, ಪಕ್ಷ ಬೆಳೆಸಿದ ನಾಯಕಗೆ ಮಾಡಿದ ಅಪಮಾನವಾಗುತ್ತದೆ ಎನ್ನುವುದು ಹೈಕಮಾಂಡ್ ಗೂ ಅರಿವಿದೆ.

ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಲೇಬೇಕು ಎನ್ನುವ ನಿರ್ಧಾರ ಹೈಕಮಾಂಡ್ ಗೆ ಇದ್ದರೆ, ಬೇರೆ ರೀತಿಯ ಪ್ರಯತ್ನಗಳಿಂದ ನಾಯಕತ್ವ ಬದಲಾವಣೆ  ಮಾಡಬಹುದು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ. ಆದರೂ, ಬಿಜೆಪಿ ಉಸ್ತುವಾರಿಗಳು ನೀಡಿರುವ ಹೇಳಿಕೆ “ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದಂತೆ” ಎನ್ನುವ ಗಾದೆ ಮಾತಿನಂತಾಗಿ ಬಿಟ್ಟಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ