ಮಾರ್ಗಸೂಚಿಯಿಂದ ಈ ಹಬ್ಬಗಳಿಗೆ ತೊಂದರೆಯಾಗಬಹುದು!
ಬೆಂಗಳೂರು: ಕೊರೊನಾ ಎರಡನೇ ಅಲೆ ಬರುತ್ತಿದೆ ಎಂದು ಆರೋಗ್ಯ ಸಚಿವರಾದ ಡಾ.ಸುಧಾಕರ್ ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕೊರೊನಾ ಮಾರ್ಗ ಸೂಚಿಗಳು ಮುಂದಿನ ದಿನಗಳಲ್ಲಿ ಬರುತ್ತಿರುವ ವಿವಿಧ ಹಬ್ಬ ಹರಿದಿನಗಳಿಗೆ ಸಮಸ್ಯೆಯಾಗುವ ಸಾಧ್ಯತೆಗಳು ಕಂಡು ಬರುತ್ತಿವೆ.
ದೇಶದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುತ್ತಿರುವುದರ ನಡುವೆಯೇ ಕೊರೊನಾ ಭೀತಿ ಮೂಡಿದೆ. ಕೊರೊನಾ ಲಸಿಕೆ ಬಂದಿದ್ದು ಇನ್ನು ಭಯವಿಲ್ಲ ಎಂದು ನಿರಾಳವಾಗಿದ್ದ ಜನರಿಗೆ ಸರ್ಕಾರದ ಮಾರ್ಗ ಸೂಚಿಗಳು ಮತ್ತೆ ಮೇಲಿಂದ ಮೇಲೆ ಭೀತಿಯನ್ನುಂಟು ಮಾಡಿದೆ.
ಅಂಬೇಡ್ಕರ್ ಜಯಂತಿ, ಯುಗಾದಿ, ಹೋಳಿ, ಶಬ್ ಎ ಬರತ್, ಗುಡ್ ಫ್ರೈಡೆ ಬರುತ್ತಿವೆ. ಈ ನಡುವೆ ಮಾರ್ಗ ಸೂಚಿಗಳು ಜಾರಿಯಾದರೆ, ಜನರಿಗೆ ತೊಂದರೆಯಾಗುತ್ತದೆ. ಪ್ರತಿ ಬಾರಿಯೂ ಹಬ್ಬಗಳ ಸಂದರ್ಭದಲ್ಲಿ ಮಾರ್ಗಸೂಚಿಗಳು ಬಲಗೊಳ್ಳುತ್ತಿವೆ. ಹೀಗಾಗಿ ಜನರು ಕೂಡ ಬೇಸರ ಮಾಡಿಕೊಂಡಿದ್ದಾರೆ. ಒಂದೆಡೆ ಸರ್ಕಾರ ಮಾರ್ಗ ಸೂಚಿ ಜಾರಿಗೊಳಿಸುವ ಅನಿವಾರ್ಯ ಪರಿಸ್ಥಿತಿಯಲ್ಲಿದ್ದರೆ, ಇನ್ನೊಂದೆಡೆ ಜನರು ತಮ್ಮ ಹಬ್ಬಗಳನ್ನು ಆಚರಿಸಲಾಗದೇ ಖಿನ್ನರಾಗುತ್ತಿದ್ದಾರೆ.
ಹಬ್ಬಗಳ ದಿನದಂದು ಸಾರ್ವಜನಿಕ ಸ್ಥಳ, ಮೈದಾನ, ಪಾರ್ಕ್, ಮಾರ್ಕೆಟ್ ಮತ್ತು ಪ್ರಾರ್ಥನಾ ಮಂದಿರಗಳಲ್ಲಿ ಆಚರಣೆಯನ್ನು ನಿಷೇಧಿಸಿದೆ. ಆದೇಶವನ್ನು ಉಲ್ಲಂಘಿಸಿದರೆ ಎನ್ಡಿಎಂಎ ಕಾಯ್ದೆಯಡಿ ಕ್ರಮಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಎಚ್ಚರಿಸಿದೆ.
ಸರ್ಕಾರವು ಜನರಿಗೆ ನಿರ್ಬಂಧ ಹೇರುವ ಬದಲು ಕೊರೊನಾ ವೈರಸ್ ವಿರುದ್ಧ ಹೋರಾಡಲು ಬೇಕಾದ ಸಿದ್ಧತೆಗಳನ್ನು ಜನರಿಗೆ ಸಲಹೆ ನೀಡುವುದು ಉತ್ತಮ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಮೊದಲ ಕೊರೊನಾ ಅಲೆಯ ಕೊನೆಯ ಹಂತದಲ್ಲಿ ಜನರು, ಬಿಸಿ ನೀರು ಬಳಸುವುದು, ಮನೆಯಿಂದ ಹೊರ ಹೋಗಿ ಬಂದ ಬಳಿಕ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು, ಮನೆಯ ಮುಂದೆ ಸೋಪು ಇಟ್ಟು ಕೈ ತೊಳೆದು ಮನೆಯ ಒಳಗೆ ಬರುವುದು ಮೊದಲಾದ ಜಾಗೃತಿಗಳನ್ನು ಸ್ವತಃ ತೆಗೆದುಕೊಂಡಿದ್ದರು. ಹಾಗೆಯೇ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂತಹ ಸಲಹೆಗಳನ್ನು ಜನರಿಗೆ ನೀಡಬಹುದಲ್ಲವೇ ಎಂಬ ಅಭಿಪ್ರಾಯಗಳೂ ಕೇಳಿ ಬಂದಿವೆ.