ಮಹೇಶ್ ಭಟ್ ನ್ನು ಬಂಧಿಸಿ ಇಲ್ಲವೇ, ವಿಟ್ಲ ಪೊಲೀಸರು ಖಾಕಿ ಕಳಚಿ ಆತನ ತೋಟದಲ್ಲಿ ಕೂಲಿ ಕೆಲಸ ಮಾಡಲಿ: ಸಂತೋಷ್ ಬಜಾಲ್

vittla protest
03/04/2025

ವಿಟ್ಲ: ಮಾಣಿಲ ಸಮೀಪ ಇತ್ತೀಚೆಗೆ ನಡೆದ  ದಲಿತ  ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿರುವ ಭೂಮಾಲಕ ಮಹೇಶ್ ಭಟ್ ನನ್ನು ತಕ್ಷಣ ಬಂಧಿಸಲು ಒತ್ತಾಯಿಸಿ, ಸಂತ್ರಸ್ತ ದಲಿತ ಕುಟುಂಬಕ್ಕೆ ಧೈರ್ಯ ತುಂಬಿ ಪ್ರಕರಣದ ಸಮಗ್ರ ತನಿಖೆ ನಡೆಸಲು, ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಲು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಹಾಗೂ ವಿವಿಧ ದಲಿತ ಮತ್ತು ಸಮಾನ ಮನಸ್ಕ ಸಂಘಟನೆಗಳು ಇದರ ಸಹಭಾಗಿತ್ವದಲ್ಲಿ ವಿಟ್ಲದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ವಿಟ್ಲದ ಖಾಸಗಿ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ವಿಟ್ಲದ ಮುಖ್ಯ ರಸ್ತೆಯಲ್ಲಿ ಸಂಚರಿಸಿ, ನಾಡಕಚೇರಿ ಬಳಿ ಪ್ರತಿಭಟನಾ ಸಭೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಹಕ್ಕುಗಳ ರಾಜ್ಯ ಸಮಿತಿ ಸದಸ್ಯೆ ಈಶ್ವರಿ ಪದ್ಮುಂಜ,  ಈ ಪ್ರಕರಣವನ್ನು ಪೊಲೀಸರು ಮರೆಮಾಚಿದ್ದಾರೆ. ಕೊಲೆ ಬೆದರಿಕೆ ಹೆತ್ತವರಿಗೆ ಬಂದರೂ ಪೊಲೀಸರು ಮೌನವಾಗಿದ್ದಾರೆ. ಮುಂದೆ ನಮ್ಮ ಮಕ್ಕಳಿಗೆ ತೊಂದರೆ ಆಗಬಾರದು ಎಂಬ ಸಂದೇಶ ನೀಡಲು ಈ ಹೋರಾಟ ನಡೆಸಲಾಗುತ್ತಿದೆ.  ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಮಹೇಶ್ ಭಟ್ ನನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ ಅವರು ಪೊಲೀಸರ ಮಕ್ಕಳ ಮೇಲೆ ಈ ರೀತಿಯ ದೌರ್ಜನ್ಯವಾದರೆ ಪೊಲೀಸರು ಈ ರೀತಿಯಾಗಿ ವರ್ತಿಸುತ್ತಿದ್ದರಾ? ಎಂದು ಪ್ರಶ್ನಿಸಿದರು.

ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಬಾಲಕಿ ಮೇಲೆ ಕೇವಲ  ಲೈಂಗಿಕ ಕಿರುಕುಳ ಮಾತ್ರ ನಡೆದಿಲ್ಲ, ಅತ್ಯಾಚಾರ ನಡೆದಿರುವ ಶಂಕೆ ಇದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಘಟನೆ ನಡೆದು  ಹಲವು ದಿನಗಳು ಕಳೆದರೂ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದರೆ ನಂಬಲು ಅಸಾಧ್ಯ. ಪೊಲೀಸರು ಅತ್ಯಾಚಾರಿಯನ್ನು ರಕ್ಷಣೆ ಮಾಡುತ್ತಿದ್ದಾರೆ. ಆತನನ್ನು ಪತ್ತೆ ಹಚ್ಚಲು ಸಾಧ್ಯವಾಗದಿದ್ದರೆ ವಿಟ್ಲ ಪೊಲೀಸರು ಖಾಕಿ ಕಳಚಿ ಭೂ ಮಾಲಕನ ತೋಟದಲ್ಲಿ ಕೂಲಿ ಕೆಲಸ ಮಾಡಲಿ. ಹೆಣ್ಮಕ್ಕಳೆಂದರೆ ಮೇಲ್ವರ್ಗದ ಕಾಮುಕರಿಗೆ ಬೋಗದ ವಸ್ತುವಾಗಿದೆ. ಇದು ಅವರ ಮನುವಾದ ಸಂಸ್ಕ್ರತಿ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟಿದ್ದು ಕೇವಲ ಜಾತಿ ವಿರೋಧಿ ಎಂಬ ಕಾರಣಕಷ್ಟೇ ಅಲ್ಲ ಅದು ಸ್ತ್ರೀ ವಿರೋಧಿ ಎಂಬ ಕಾರಣಕ್ಕೂ. ಧರ್ಮ‌ರಕ್ಷಣೆಯ ಹೆಸರಲ್ಲಿ ಅನ್ಯ ಧರ್ಮೀಯರ ಮೇಲೆ ಎತ್ತಿಕಟ್ಟಲು ಓಡೋಡಿ ಬರುವ ಬಿಜೆಪಿ ಶಾಸಕರುಗಳು ಮಾಣಿಲ ಗ್ರಾಮದ ಕಡೆ ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿದರು. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಿ ಈ ಘಟನೆಯ ಸತ್ಯಾಸತ್ಯತೆ ಹೊರಗಡೆ ಬರಬೇಕು. ಇಲ್ಲದಿದ್ದಲ್ಲಿ ಮುಂದೆ ಎಸ್ಪಿ ಚಲೋ ಕಚೇರಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಮಿಕ ಮುಖಂಡ ಶೇಖರ ಮಾತನಾಡಿ, ಜಾತಿ ಧರ್ಮ ಬಿಟ್ಟು ಎಲ್ಲರೂ ಇಲ್ಲಿ ಸೇರಿದ್ದು, ನಮ್ಮೆಲ್ಲರ ಉದ್ದೇಶವೇ ಬಡ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿದೆ. ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆಯಿಂದಾಗಿ  ಜನರು ನ್ಯಾಯ ವಂಚಿತರಾಗುತ್ತಿದ್ದಾರೆ ಎಂದರು.

ದಿನೇಶ್ ಮೂಳೂರು ಮಾತನಾಡಿ, ಬಿಜೆಪಿಯಲ್ಲಿರುವ ದಲಿತ್ ಯುವಕರು ಮಾತನಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ನಿಮಗೆ ಅನ್ಯಾಯವಾದಾಗ ಯಾರೂ ಮುಂದೆ ಬರಲ್ಲ. ಪ್ರಗತಿಪರ ಮತ್ತು ದಲಿತ್ ಸಂಘಟನೆ ಮಾತ್ರ ಮುಂದೆ ಬರುತ್ತದೆ. ಮಹೇಶ್ ಭಟ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಹೋರಾಟ ಮುಂದುವರೆಯಲಿದೆ ಎಂದರು.

ಕಾರ್ಮಿಕ ಮುಖಂಡ ಬಿ.ಎಂ.ಭಟ್ ಮಾತನಾಡಿದರು. ರೈತ ಮುಖಂಡರಾದ ಕೆ.ಯಾದವ ಶೆಟ್ಟಿ, ಮಂಜುಳಾ ನಾಯಕ್, ಅಶೋಕ್ ಕೊಂಚಾಡಿ, ಬಿ.ಕೆ.ಇಮ್ತಿಯಾಜ್, ಸದಾಶಿವ ಪಡುಬಿದ್ರೆ, ಸರೋಜಿನಿ, ದಿನೇಶ್, ಎಸ್.ಪಿ ಆನಂದ್, ಸೇಸಪ್ಪ ಬೆದ್ರಕಾಡ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಚಂದ್ರಶೇಖರ್ ಕಿನ್ಯಾ, ವಿಶ್ವನಾಥ ಮಂಜನಾಡಿ, ಪುಷ್ಪರಾಜ್ ಮಾಣಿಲ, ಸುರೇಶ್, ಚಂದಪ್ಪ, ರಾಧಕೃಷ್ಣ ಬೊಂಡಂತಿಲ, ಕಮಲಾಕ್ಷ ಬಜಾಲ್, ರಾಘವೇಂದ್ರ ಪಡ್ಪು, ಶಿನ ಕನ್ಯಾನ, ರಾಮಪ್ಪ ಮಂಜೇಶ್ವರ, ಗಂಗಾಧರ ಗೋಲಿಯಡ್ಕ, ವಿಜಯ ಮೂಡಬಿದರೆ, ಡಿವೈಎಫ್ಐ ಮುಖಂಡರಾದ ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ನವೀನ್ ಕೊಂಚಾಡಿ, ರಝಾಕ್ ಮುಡಿಪು, ಅಸುಂತ ಡಿಸೋಜ, ಪ್ರಮಿಳಾ ಶಕ್ತಿನಗರ, ಸುನಿತಾ ತಣ್ಣೀರುಬಾವಿ, ಜೆಸಿಂತಾ ಜೋಕಟ್ಟೆ, ಅಭಿಷೇಕ್ ಬೆಳ್ತಂಗಡಿ, ಯೋಗಿತಾ ಕಾರ್ಮಿಕ ಮುಖಂಡರಾದ ಸುಕುಮಾರ್ ತೊಕ್ಕೊಟ್ಟು, ರಮೇಶ್, ಯೋಗೀಶ್ ಜಪ್ಪಿನಮೊಗರು, ಸಂತ್ರಸ್ತ ಕುಟುಂಬದ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

ಬಳಿಕ ಉಪತಹಶೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.  ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷರಾದ ಕೃಷ್ಣಪ್ಪ ಕೊಣಾಜೆ ಸ್ವಾಗತಿಸಿದರು, ಕೃಷ್ಣ ತಣ್ಣೀರುಬಾವಿ ವಂದಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version