ಯಡಿಯೂರಪ್ಪ ಹಗರಣಗಳು ಹೊರ ಬಂದರೆ, ಮಠಾಧೀಶರುಗಳೆಲ್ಲ ಮಠ ಬಿಟ್ಟು ಓಡಿ ಹೋಗಬೇಕಾಗುತ್ತದೆ | ಯತ್ನಾಳ್
ಮೈಸೂರು: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬೂದಿಮುಚ್ಚಿದ ಕೆಂಡದಂತಿದ್ದು, ಇದೀಗ ಮತ್ತೆ ಸಿಎಂ ಯಡಿಯೂರಪ್ಪ ಮಾತ್ರವಲ್ಲದೇ ಅವರಿಗೆ ಬೆಂಬಲವಾಗಿ ನಿಂತಿರುವ ಮಠಾಧೀಶರ ವಿರುದ್ಧವೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ.
ಮೈಸೂರು ಪ್ರವಾಸದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇಂದು ಮುಖ್ಯಮಂತ್ರಿಗಳ ಪರವಾಗಿ ಮಾತನಾಡುವ ಮಠಾಧೀಶರು ಬಹಳ ಎಚ್ಚರಿಕೆಯಿಂದ ಮಾತನಾಡಬೇಕು, ಮುಖ್ಯಮಂತ್ರಿಗಳ ಹಗರಣಗಳು ಒಂದೊಂದೇ ಹೊರಗೆ ಬಂದಾಗ ಈ ಮಠಾಧೀಶರುಗಳೆಲ್ಲ ಮಠ ಬಿಟ್ಟು ಓಡಿಹೋಗಬೇಕಾಗುತ್ತದೆ, ನಾವು ಈಗ ಸುಮ್ಮನೆ ಕುಳಿತಿದ್ದೇವೆ, ಕೊನೆಗೊಂದು ದಿನ ಬ್ರಹ್ಮಾಸ್ತ್ರ ಪ್ರಯೋಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ತಮ್ಮ ಹಾಗೂ ಯಡಿಯೂರಪ್ಪ ನಡುವಿಗ ಹೋರಾಟವನ್ನು ಮಹಾಭಾರತಕ್ಕೆ ಹೋಲಿಸಿದ ಅವರು, . ಸಿಎಂ ಬಿಎಸ್ ವೈ ಚಕ್ರವ್ಯೂಹ ವಿರುದ್ಧ ಹೋರಾಡಿ ನಾನು ಅರ್ಜುನನಾಗಿ ಗೆಲ್ಲುತ್ತೇನೆ. ನಾನು ಅಭಿಮನ್ಯುನೂ ಆಗಬಹುದು, ಅರ್ಜುನನೂ ಆಗಬಹುದು ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಅಭಿಮನ್ಯುವಿನ ಇತಿಹಾಸವನ್ನು ಈಗಲೂ ಜನರು ನೆನಪು ಮಾಡಿಕೊಳ್ಳುತ್ತಾರೆ, ಅಭಿಮನ್ಯು ಒಬ್ಬ ಶ್ರೇಷ್ಠ ಯೋಧ, ನಾನು ಅರ್ಜುನನಾಗುತ್ತೇನೆ, ಸಿಎಂ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಗೌರವಯುತವಾಗಿ ಅವರು ನಿವೃತ್ತಿ ತೆಗೆದುಕೊಳ್ಳಬೇಕು, ಅವರ ಆಡಳಿತವನ್ನು ಪುತ್ರ ವಿಜಯೇಂದ್ರ ನಡೆಸುತ್ತಿದ್ದಾನೆ. ಮುಖ್ಯಮಂತ್ರಿಗಳಿಗೆ ನೂರಾರು ಫೈಲ್ ಗಳಿಗೆ ಸಹಿ ಮಾಡುವ ಶಕ್ತಿ ಕೂಡ ಇಲ್ಲ, ಇಂತಹ ಸಂದರ್ಭದಲ್ಲಿ ಅವರಿಗೆ ಅಧಿಕಾರವೇಕೆ, ಸ್ವಯಂ ನಿವೃತ್ತಿ ಪಡೆಯಬೇಕು ಎಂದು ಅವರು ಹೇಳಿದರು.
ನಿಮ್ಮದು ಅರಣ್ಯ ರೋಧನ ಎಂದು ಎನಿಸುವುದಿಲ್ಲವೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಹೋರಾಟ, ಸಂಘರ್ಷಗಳಲ್ಲಿ ಅರಣ್ಯರೋಧನ ಇದ್ದೇ ಇರುತ್ತದೆ, ಆದರೆ ಒಂದಲ್ಲ ಒಂದು ದಿನ ಸತ್ಯ ಬೆಳಕಿಗೆ ಬಂದೇ ಬರುತ್ತದೆ. ಪಾಂಡವರಿಗೆ ವನವಾಸ ಹೋಗಿ ಬಂದ ಮೇಲೆ ಜಯ ಸಿಕ್ಕಿತು, ಹಾಗೆಯೇ ನಾವು ವನವಾಸ ಮುಗಿಸಿ ಅಜ್ಞಾತವಾಸದಲ್ಲಿದ್ದೇವೆ, ಅಜ್ಞಾತವಾಸವೂ ಮುಗಿಯುತ್ತಾ ಬಂದಿದೆ, ಹೋರಾಟ ನಡೆಯುತ್ತಿದೆ, ಪಟ್ಟಾಭಿಷೇಕ ಮಾಡುವ ಕಾಲ ಬಂದಿದೆ, ಒಂದಲ್ಲ ಒಂದು ದಿನ ಜಯ ಸಿಗುತ್ತದೆ ಎಂದರು.